ಹಾಸನ: ಆಷಾಢ ಮಾಸದ ಕಡೆಯ ಶುಕ್ರವಾರ: ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ರಂಗಪೂಜೆ

  • ಹಾಸನದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಆಷಾಢ ಮಾಸದ ಕಡೆಯ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ, ರಂಗಪೂಜೆ, ಪ್ರಾಕಾರೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.

ಹಾಸನ, ಆ. 8: ದೇವರ ಸನ್ನಿಧಿಯಲ್ಲಿ ರಂಗವನ್ನು ಸಿದ್ಧಪಡಿಸಿ ಶಕ್ತಿ ಸ್ವರೂಪಿಣಿಯಾದ ದೇವಿಯನ್ನು ಆಹ್ವಾನಿಸಿ, ಭಕ್ತಿ, ಶ್ರದ್ಧೆ ಮತ್ತು ಸಮರ್ಪಣೆಯೊಂದಿಗೆ ದೀಪ-ನೈವೇದ್ಯಗಳ ಮೂಲಕ ನೆರವೇರಿಸುವ ಮಂಗಳಕರ ಆರಾಧನೆಯೇ ರಂಗಪೂಜೆ ಸೇವೆ ಎಂದು ವೇದಬ್ರಹ್ಮ ಶ್ರೀ ಪುರೋಹಿತ್ ಎನ್. ಪ್ರವೀಣ್ ಕುಮಾರ್ ಹೇಳಿದರು.

ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಆಷಾಢ ಮಾಸದ ಕಡೆಯ ಶುಕ್ರವಾರದ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಂಗಪೂಜೆ ಸೇವೆ ನೆರವೇರಿಸಿ ಅವರು ಮಾತನಾಡಿದರು.

ಆಷಾಢ ಮಾಸದಲ್ಲಿ ಶಿವಶಕ್ತಿಯ ಸ್ವರೂಪವಾದ ದೇವಿಯ ಆರಾಧನೆ ಮಾಡುವುದರಿಂದ ಶುಭಫಲಗಳನ್ನು ಪಡೆಯಬಹುದು. ಆಷಾಢ ಮಾಸದ ಕಡೆಯ ಶುಕ್ರವಾರದಂದು ವಿಶೇಷವಾಗಿ ಲಕ್ಷ್ಮೀ ದೇವಿಯು ಭಕ್ತರ ಬೇಡಿಕೆಗಳನ್ನು ಆಲಿಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ವಿವಿಧ ಧಾರ್ಮಿಕ ಸೇವೆಗಳು

ಕಾರ್ಯಕ್ರಮದಲ್ಲಿ ವಿಶೇಷ ಅಲಂಕಾರ ಸಹಿತ ಪೂಜೆ, ಪ್ರಾಕಾರೋತ್ಸವ ಸೇವೆ, ರಂಗಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸೇವಾರ್ಥಿಗಳಾದ ಹೆಚ್. ಎಂ. ಜ್ಯೋತಿ ಮತ್ತು ಹೆಚ್. ಕೆ. ಸತೀಶ್ ದಂಪತಿಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಸಾಂಪ್ರದಾಯಿಕವಾಗಿ ಗೌರವಿಸಲಾಯಿತು.

ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಕುಮಾರಿ ವಿಸ್ಮಿತ ಹಾಗೂ ಕುಮಾರಿ ಹೆಚ್. ಎ. ಹಿಮ ಅವರು ಭರತನಾಟ್ಯ ಸೇವೆ ಸಲ್ಲಿಸಿದರು.

ವಿಶೇಷ ಪೂಜಾ ದಿನದ ಅಂಗವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್, ನಿರ್ದೇಶಕ ಜಿ. ಎಸ್. ಜಯರಾಜು, ವೈ. ಮಧುಕುಮಾರ್, ಪೂಜಾ ಸಮಿತಿ ಅಧ್ಯಕ್ಷ ಹೆಚ್. ಕೆ. ಆನಂದ್, ತಾಲ್ಲೂಕು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಚ್. ಎಸ್. ಆನಂದ್, ಸಹ ಕಾರ್ಯದರ್ಶಿ ಎಂ. ಟಿ. ಸುರೇಶ್, ಖಜಾಂಚಿ ಹೆಚ್. ಎಂ. ಮಂಜು, ನಿರ್ದೇಶಕರಾದ ಬಿ. ಲೋಕೇಶ್, ಹೆಚ್. ಹೆಚ್. ಶ್ರೀನಿವಾಸ್, ರುಕ್ಮಾಂಗದಚಾರ್, ಎಂ. ಸುದೇವನ್ ಹಾಗೂ ಮಹಿಳಾ ಮಂಡಳಿ ಅಧ್ಯಕ್ಷೆ ಅನಿಲ ಪದ್ಮನಾಭ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.