27.4 C
Munich
Home ಕ್ರೈಮ್‌ ಬೆಂಗಳೂರಿನಲ್ಲಿ ನಿಗೂಢ ಸಾವು: ವರ್ಷಗಳ ಬಳಿಕ ಮಹಿಳೆಯ ಅಸ್ಥಿಪಂಜರ ಪತ್ತೆ

ಬೆಂಗಳೂರಿನಲ್ಲಿ ನಿಗೂಢ ಸಾವು: ವರ್ಷಗಳ ಬಳಿಕ ಮಹಿಳೆಯ ಅಸ್ಥಿಪಂಜರ ಪತ್ತೆ

ಬೆಂಗಳೂರು, ಆ. 8 (kannadapost.com):  ಬೆಂಗಳೂರಿನ ಬಾಗಲಗುಂಟೆ ಪ್ರದೇಶದ ಮನೆಯೊಂದರಲ್ಲಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿರುವ 52 ವರ್ಷದ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಗಲಗುಂಟೆಯ ಹವನೂರು ಲೇಔಟ್‌ನ ದ್ವಿಮಹಡಿ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಮೃತರನ್ನು ದಾಕ್ಷಾಯಿಣಿ (52) ಎಂದು ಗುರುತಿಸಲಾಗಿದೆ. ಮಹಿಳೆ ಸುಮಾರು ಒಂದು ವರ್ಷದ ಹಿಂದೆಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು

ಪ್ರಾಥಮಿಕ ಮಾಹಿತಿಯ ಪ್ರಕಾರ ದಾಕ್ಷಾಯಿಣಿ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ. ಅವರ ಪತಿ ಉಮೇಶ್ ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಅವರ ಪುತ್ರ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಾಕ್ಷಾಯಿಣಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಮಹಿಳೆ ಮೃತಪಟ್ಟ ಬಳಿಕವೂ ಮನೆಯೊಳಗೇ ಅಸ್ಥಿಪಂಜರ ಉಳಿದುಕೊಂಡಿದ್ದರೂ, ಇಷ್ಟು ದಿನ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನುವುದು ಪ್ರಕರಣದ ನಿಗೂಢತೆಯನ್ನು ಹೆಚ್ಚಿಸಿದೆ.

ಪುತ್ರಿ, ಅಳಿಯ ಮನೆಗೆ ಭೇಟಿ ನೀಡಿರಲಿಲ್ಲ

ದಾಕ್ಷಾಯಿಣಿ ಅವರ ಪುತ್ರಿ ಹಾಗೂ ಅಳಿಯ ಕಳೆದ ಒಂದು ವರ್ಷದ ಅವಧಿಯಲ್ಲಿ ಮನೆಗೆ ಭೇಟಿ ನೀಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಹಿಳೆಯ ಸಾವಿನ ವಿಚಾರವೂ ತಡವಾಗಿ ಬೆಳಕಿಗೆ ಬಂದಿದೆ.

ಸಾವಿಗೆ ಕಾರಣವೇನು?

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಸಾವು ಯಾವ ಪರಿಸ್ಥಿತಿಯಲ್ಲಿ ಸಂಭವಿಸಿತು? ಸಹಜ ಸಾವೇ ಅಥವಾ ಬೇರೆ ಕಾರಣವಿದೆಯೇ? ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಅಸ್ಥಿಪಂಜರವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆಯ ಬಳಿಕ ಸಾವಿನ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

error: Content is protected !!