ಮೈಸೂರು, ಆ. 8 (kannadapost.com) : ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿ ಅಪಹರಿಸಿ, ಚಿನ್ನಾಭರಣ ಹಾಗೂ ಹಣ ದೋಚಿದ ಆರೋಪದ ಮೇಲೆ ನಾಲ್ವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ವರುಣ ಹೋಬಳಿಯ ಮುದ್ದೇಗೌಡನಹುಂಡಿ ಗ್ರಾಮದ ರಾಮು ದರೋಡೆಗೊಳಗಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಜು, ಕಾರ್ತಿಕ್ ಕೆ.ಎಂ., ಆನಂದ್ ಎನ್. ಹಾಗೂ ಪುರುಷೋತ್ತಮ್ ಎ.ಎಸ್. ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
₹4.30 ಲಕ್ಷ ನಗದು ಸೇರಿ ವಾಹನಗಳು ವಶ
ಬಂಧಿತರಿಂದ ₹4.30 ಲಕ್ಷ ನಗದು, ಕೆಎ-08 ಎಂ-3252 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಕಾರು, ಹೋಂಡಾ ಶೈನ್ ಬೈಕ್, ಹೋಂಡಾ ಆಕ್ಟಿವಾ ಸ್ಕೂಟರ್ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತೋಟದ ಮನೆಯಿಂದ ತೆರಳುತ್ತಿದ್ದಾಗ ಅಪಹರಣ
ರಾಮು ಅವರು ತೋಟದ ಮನೆಯಿಂದ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳು ಕಾರಿನಲ್ಲಿ ಬಂದು ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರನ್ನು ಅಪಹರಿಸಿ, ಅವರ ಬಳಿಯಿದ್ದ ಚಿನ್ನಾಭರಣವನ್ನು ದೋಚಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ₹16 ಲಕ್ಷ ಹಣವನ್ನು ತರಿಸಿಕೊಂಡು ದರೋಡೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ರಾಮು ಅವರು ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸ್ ತಂಡದಿಂದ ಕಾರ್ಯಾಚರಣೆ
ಪ್ರಕರಣದ ತನಿಖೆಯನ್ನು ಮೈಸೂರು ಗ್ರಾಮಾಂತರ ವೃತ್ತದ ಸಿಪಿಐ ಡಿ.ಬಿ. ಜಯಪ್ರಕಾಶ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ವರುಣ ಪೊಲೀಸ್ ಠಾಣೆಯ ಪಿಎಸ್‌ಐ ಸದಾಶಿವ ತಿಪರಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












