- ಹಾಸನ ಜಿಲ್ಲೆ ಸಕಲೇಶಪುರದ ಹೊಡಚಳ್ಳಿ ಗ್ರಾಮದ ಡೀಮ್ಡ್ ಫಾರೆಸ್ಟ್ ಒಳಗೆ ಅಕ್ರಮವಾಗಿ ನುಗ್ಗಿ 7 ಮಹೀಂದ್ರ ಥಾರ್ ಜೀಪ್ಗಳಲ್ಲಿ ಆಫ್ ರೋಡ್ ಮಾಡುತ್ತಿದ್ದ ಬೆಂಗಳೂರಿನ ಪ್ರವಾಸಿಗರ ಮೇಲೆ ಅರಣ್ಯಾಧಿಕಾರಿಗಳ ದಾಳಿ.
ಸಕಲೇಶಪುರ: ತಾಲೂಕಿನ ಹೊಡಚಳ್ಳಿ ಗ್ರಾಮದ ಬಳಿ ಪರಿಭಾವಿತ ಅರಣ್ಯ (Deemed Forest) ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿ ಆಫ್ ರೋಡ್ (Off-road) ಸಾಹಸ ಮಾಡುತ್ತಿದ್ದ ಬೆಂಗಳೂರಿನ ಪ್ರವಾಸಿಗರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯ ವೇಳೆ ಏಳು ಮಹೀಂದ್ರ ಥಾರ್ ಜೀಪ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಅರಣ್ಯ ಪ್ರದೇಶದಲ್ಲಿ ಪುಂಡಾಟ, ಪ್ರಕೃತಿಗೆ ಹಾನಿ
ಬೆಂಗಳೂರಿನಿಂದ ಆಗಮಿಸಿದ್ದ ಯುವಕರ ತಂಡವೊಂದು ಹೊಡಚಳ್ಳಿ ಗ್ರಾಮದ ಸರ್ವೆ ನಂ. 20, 21 ಹಾಗೂ 28 ರಲ್ಲಿರುವ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದೆ.
- ಯಾವುದೇ ಅನುಮತಿ ಇಲ್ಲದೆ 7 ಮಹೀಂದ್ರ ಥಾರ್ ಜೀಪ್ಗಳಲ್ಲಿ ಅರಣ್ಯದೊಳಗೆ ವಾಹನಗಳನ್ನು ಮನಬಂದಂತೆ ಚಲಾಯಿಸಿದ್ದಾರೆ.
- ಯುವಕರ ಈ ಆಫ್ ರೋಡ್ ಹುಚ್ಚಾಟದಿಂದಾಗಿ ಸೂಕ್ಷ್ಮ ಪ್ರದೇಶವಾದ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿ ಉಂಟಾಗುತ್ತಿತ್ತು.
ಅಧಿಕಾರಿಗಳ ದಿಢೀರ್ ದಾಳಿ, ಪ್ರಕರಣ ದಾಖಲು
ಅರಣ್ಯದೊಳಗೆ ಅಕ್ರಮವಾಗಿ ವಾಹನಗಳು ಪ್ರವೇಶಿಸಿರುವ ಖಚಿತ ಮಾಹಿತಿ ಮೇರೆಗೆ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದೆ.
- ಅರಣ್ಯ ಅಧಿಕಾರಿಗಳಾದ ಮಂಜುನಾಥ್, ಅರ್ಜುನ್ ಹಾಗೂ ಮಹದೇವಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
- ಸ್ಥಳದಲ್ಲಿ ಸಿಕ್ಕಿಬಿದ್ದ ಪ್ರವಾಸಿಗರಿಂದ ಆಫ್ ರೋಡ್ಗೆ ಬಳಸಿದ್ದ 7 ಜೀಪ್ಗಳನ್ನು ವಶಕ್ಕೆ ಪಡೆಯಲಾಗಿದೆ.
- ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯಜೀವಿಗಳಿಗೆ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡಿದ ಕೀಚಕರ ವಿರುದ್ಧ ಅರಣ್ಯ ಕಾಯ್ದೆಯಡಿ (Forest Act) ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.












