ಹಾಸನ, ಜುಲೈ 31: ಸಾಲದ ಹೊರೆ ಹಾಗೂ ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಸೋಮನಹಳ್ಳಿಕಾವಲು ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ರಾಮೇಗೌಡ (42) ಎಂದು ಗುರುತಿಸಲಾಗಿದೆ. ಬ್ಯಾಂಕ್, ಖಾಸಗಿ ಫೈನಾನ್ಸ್ ಹಾಗೂ ಕೈಸಾಲ ಸೇರಿದಂತೆ ರಾಮೇಗೌಡ ಅವರು ಒಟ್ಟು ಸುಮಾರು ₹16 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಾಶ
ಕೃಷಿಯನ್ನೇ ನಂಬಿಕೊಂಡಿದ್ದ ರಾಮೇಗೌಡ ಅವರು ಸಾಲ ಮಾಡಿ ತಮ್ಮ ಜಮೀನಿನಲ್ಲಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ, ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು ಎನ್ನಲಾಗಿದೆ.
ಬೆಳೆ ಕೈಕೊಟ್ಟ ಪರಿಣಾಮ ನಿರೀಕ್ಷಿಸಿದ್ದ ಆದಾಯವೂ ಸಿಗದೆ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿತ್ತು. ಈಗಾಗಲೇ ವಿವಿಧ ಮೂಲಗಳಿಂದ ಪಡೆದಿದ್ದ ಸಾಲದ ಹೊರೆ ಹೆಚ್ಚಾಗಿದ್ದರಿಂದ ರಾಮೇಗೌಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಿಳಿದುಬಂದಿದೆ.
ಮನೆ ನಿರ್ಮಾಣಕ್ಕೂ ₹4 ಲಕ್ಷ ಸಾಲ
ಇದರ ಜೊತೆಗೆ ಮನೆ ನಿರ್ಮಾಣಕ್ಕಾಗಿ ರಾಮೇಗೌಡ ಅವರು ಸುಮಾರು ₹4 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಕೃಷಿಗಾಗಿ ಪಡೆದ ಸಾಲ, ಫೈನಾನ್ಸ್ ಮತ್ತು ಕೈಸಾಲದ ಜೊತೆಗೆ ಮನೆ ನಿರ್ಮಾಣದ ಸಾಲವೂ ಸೇರಿ ಆರ್ಥಿಕ ಒತ್ತಡ ಹೆಚ್ಚಾಗಿತ್ತು.
ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಮೇಗೌಡ ಅವರು ಇಂದು ತಮ್ಮ ಜಮೀನಿಗೆ ತೆರಳಿ, ಅಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ
ಮಾಹಿತಿ ಪಡೆದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಸಾಲದ ವಿವರಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.












