ಹಾಸನ, ಜು.27(kannadapost.com): ಹಾಸನ ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಹಾಡುಹಗಲೇ ನಡೆದಿದ್ದ ₹69.56 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿದೆ. ಮನೆಯ ಸೊಸೆಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಇಬ್ಬರನ್ನೂ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಕೇಶವೇಗೌಡ ಅವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಶನಿವಾರ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮಗನನ್ನು ಶಾಲಾ ಬಸ್ಗೆ ಹತ್ತಿಸಿ ಮನೆಗೆ ಮರಳಿದ್ದ ಸೊಸೆ ಅಮೃತಾ ಮನೆಯಲ್ಲೇ ಒಬ್ಬಳೇ ಇದ್ದಳು.
ಈ ಸಂದರ್ಭ ತನ್ನ ಪರಿಚಯದ ಪರಮೇಶ್ ಅಲಿಯಾಸ್ ಚೇತನ್ನನ್ನು ಮನೆಗೆ ಕರೆಸಿಕೊಂಡ ಅಮೃತಾ, ಬೀರುವಿನಲ್ಲಿದ್ದ 441.5 ಗ್ರಾಂ ಚಿನ್ನಾಭರಣ (ಅಂದಾಜು ₹56.16 ಲಕ್ಷ ಮೌಲ್ಯ) ಹಾಗೂ ₹13.40 ಲಕ್ಷ ನಗದುವನ್ನು ತೆಗೆದು ಪ್ರಿಯಕರನಿಗೆ ನೀಡಿದ್ದಾಳೆ ಎನ್ನಲಾಗಿದೆ.
ಕಳ್ಳತನದ ಬಳಿಕ ಮನೆಯ ಮುಂಭಾಗಿಲಿಗೆ ಬೀಗ ಹಾಕದೆ, ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ಜಮೀನಿನತ್ತ ತೆರಳಿದ್ದ ಅಮೃತಾ, ನಂತರ ಕುಟುಂಬದವರೊಂದಿಗೆ ಮನೆಗೆ ಬಂದು ಕಳ್ಳತನ ನಡೆದಿರುವಂತೆ ನಾಟಕವಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ನಾಪತ್ತೆಯಾಗಿರುವುದನ್ನು ಕಂಡ ಕೇಶವೇಗೌಡ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತ ತನಿಖೆ ನಡೆಸಿದ ವೇಳೆ ಅಮೃತಾಳ ಹೇಳಿಕೆಯಲ್ಲಿ ಅನುಮಾನ ಮೂಡಿತ್ತು. ಬಳಿಕ ವಿಚಾರಣೆ ವೇಳೆ ಸತ್ಯಾಂಶ ಹೊರಬಿದ್ದಿದ್ದು, ಹಲವು ವರ್ಷಗಳಿಂದ ಪರಿಚಯ ಹೊಂದಿದ್ದ ಪರಮೇಶ್ ಅಲಿಯಾಸ್ ಚೇತನ್ನೊಂದಿಗೆ ಸೇರಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಅಮೃತಾ ಹಾಗೂ ಪರಮೇಶ್ @ ಚೇತನ್ (ಹಿರೀಹಳ್ಳಿ ನಿವಾಸಿ) ಅವರನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












