‘ಮೋದಿಗೆ ಅಹಂಕಾರ, ಅವರ ಫಕೀರ್ ಹೇಳಿಕೆ ಸುಳ್ಳು’: CJP ಹೋರಾಟದ ಪರ ನಿಂತು ಕೇಂದ್ರದ ವಿರುದ್ಧ ರಮ್ಯಾ ಗುಡುಗು!

  • ನೀಟ್ ಪರೀಕ್ಷೆ ಅಕ್ರಮ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರಧಾನಿ ಮೋದಿ ವಿರುದ್ಧ ನಟಿ ರಮ್ಯಾ (ದಿವ್ಯ ಸ್ಪಂದನ) ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಮೋದಿಯವರದ್ದು ಬರಿ ಅಹಂಕಾರ ಎಂದಿದ್ದಾರೆ.

ಬೆಂಗಳೂರು: ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ (ದಿವ್ಯ ಸ್ಪಂದನ), ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಗೃಹ ಸಚಿವ ಅಮಿತ್ ಶಾ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಮೋದಿಗೆ ಅಹಂಕಾರ ಎಂದ ರಮ್ಯಾ:

“ರಾಹುಲ್ ಗಾಂಧಿ ಅವರು ಹೇಳಿದ್ದು ಸರಿ. ನಿರಪರಾಧಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕಾಗಿ ಅಮಿತ್ ಶಾ ರಾಜೀನಾಮೆ ನೀಡಬೇಕು. ಕೇವಲ ನೀಟ್ ಮಾತ್ರವಲ್ಲ, ಇತರ ಪ್ರಶ್ನೆಪತ್ರಿಕೆ ಸೋರಿಕೆಗಳಿಗಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಈ ಕ್ಷಣದಲ್ಲೇ ಇವರ ರಾಜೀನಾಮೆ ಪಡೆಯಬಹುದು. ಆದರೆ ಅವರಿಗೇಕೆ ಸಾಧ್ಯವಾಗುತ್ತಿಲ್ಲ? ಏಕೆಂದರೆ ಅವರಿಗೆ ವಿಪರೀತ ಅಹಂಕಾರವಿದೆ (Ego)” ಎಂದು ರಮ್ಯಾ ಕಿಡಿಕಾರಿದ್ದಾರೆ.

​”ಹಿಂದೂ ಧರ್ಮದ ಬೋಧನೆಗಳಂತೆ ಅವರು ನಡೆದುಕೊಳ್ಳುತ್ತಿಲ್ಲ. ಹಿಂದೂ ಧರ್ಮ ನಮಗೆ ಮೊದಲು ಅಹಂಕಾರವನ್ನು ತೊಡೆದುಹಾಕಲು ಕಲಿಸುತ್ತದೆ. ಆದರೆ ಅವರ ‘ಫಕೀರ್’ ಹೇಳಿಕೆಯೆಲ್ಲ ಕೇವಲ ಬೂಟಾಟಿಕೆ” ಎಂದು ಪ್ರಧಾನಿ ಮೋದಿಯವರ ಹೇಳಿಕೆಯನ್ನು ರಮ್ಯಾ ಅಣಕಿಸಿದ್ದಾರೆ.

ಅದಾನಿ-ಅಂಬಾನಿಗೆ ಮಾತ್ರ ವಿನಾಯಿತಿ: ಕಬೀರರ ದೋಹಾ ಮೂಲಕ ಟಾಂಗ್!

ತಮ್ಮ ಪೋಸ್ಟ್‌ನಲ್ಲಿ ಪ್ರಸಿದ್ಧ ಹಿಂದಿ ದೋಹಾವೊಂದನ್ನು ಉಲ್ಲೇಖಿಸಿರುವ ರಮ್ಯಾ, “ಖರ್ಜೂರದ ಮರ ದೊಡ್ಡದಾಗಿ ಬೆಳೆದರೆ ಏನು ಪ್ರಯೋಜನ? ಅದು ದಾರಿಹೋಕರಿಗೆ ನೆರಳು ಕೊಡುವುದಿಲ್ಲ ಮತ್ತು ಹಣ್ಣುಗಳು ಬಹು ದೂರದಲ್ಲಿರುತ್ತವೆ.. ಹಾಗೆಯೇ ಮೋದಿಯವರ ಅಧಿಕಾರದಿಂದಲೂ ಜನಸಾಮಾನ್ಯರಿಗೆ ಉಪಯೋಗವಿಲ್ಲ (ಅದಾನಿ ಮತ್ತು ಅಂಬಾನಿಗೆ ಮಾತ್ರ ಅವರು ವಿನಾಯಿತಿ ನೀಡುತ್ತಾರೆ ಎಂಬುದು ಬೇರೆ ಮಾತು)” ಎಂದು ಕಟುವಾಗಿ ಟೀಕಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕಿದೆ:

“ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಭದ್ರತೆಗಾಗಿ ಆಗ್ರಹಿಸುತ್ತಿರುವುದು ಸಂಪೂರ್ಣ ನ್ಯಾಯಸಮ್ಮತವಾಗಿದೆ. ನಮ್ಮ ದೇಶದಲ್ಲಿ ಇಂದು ಅಸಮಾನತೆಯ ಬಗ್ಗೆ ಸಾಕಷ್ಟು ಆಕ್ರೋಶವಿದೆ. ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಎಲ್ಲ ಹಕ್ಕೂ ಇದೆ. ಅವರ ಈ ಹೋರಾಟದಲ್ಲಿ ನಾನು ಅವರೊಂದಿಗೆ ನಿಲ್ಲುತ್ತೇನೆ. ನಿಮ್ಮ ‘ಘಮಂಡ್’ ಮತ್ತು ‘ಅಹಂಕಾರ’ವನ್ನು ಬದಿಗಿಟ್ಟು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ. ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಅನುಭವಿಸಿದ್ದಾರೆ” ಎಂದು ರಮ್ಯಾ ತಮ್ಮ ಪೋಸ್ಟ್ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.