19.3 C
Munich
Home News ಚನ್ನರಾಯಪಟ್ಟಣದಲ್ಲಿ ಚೆನ್ನಮ್ಮ ಅವರಿಗೆ ಸಾವಿರಾರು ಜನರ ಅಂತಿಮ ನಮನ

ಚನ್ನರಾಯಪಟ್ಟಣದಲ್ಲಿ ಚೆನ್ನಮ್ಮ ಅವರಿಗೆ ಸಾವಿರಾರು ಜನರ ಅಂತಿಮ ನಮನ

ಚನ್ನರಾಯಪಟ್ಟಣ (www.kannadapost.com): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಹೊತ್ತ ಶ್ರದ್ಧಾಂಜಲಿ ವಾಹನವು ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಹಾಸನ ಜಿಲ್ಲೆಯ ಹೆಬ್ಬಾಗಿಲಾದ ಚನ್ನರಾಯಪಟ್ಟಣ ತಾಲ್ಲೂಕಿನ ಗಡಿಭಾಗಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಜನರು ಭಾವುಕರಾಗಿ ಅಂತಿಮ ನಮನ ಸಲ್ಲಿಸಿದರು.

ಚನ್ನರಾಯಪಟ್ಟಣ, ನಾಗಮಂಗಲ ಹಾಗೂ ತುರುವೇಕೆರೆ ತಾಲ್ಲೂಕು ವ್ಯಾಪ್ತಿಯ ಸಾವಿರಾರು ಸಾರ್ವಜನಿಕರು ಮಧ್ಯಾಹ್ನದಿಂದಲೇ ಗಡಿಭಾಗದಲ್ಲಿ ಕಾದು ನಿಂತಿದ್ದರು. ಶ್ರದ್ಧಾಂಜಲಿ ವಾಹನ ಆಗಮಿಸುತ್ತಿದ್ದಂತೆ ಜನರು ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿ ಭಾವಪೂರ್ಣವಾಗಿ ವಿದಾಯ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಹಳ್ಳಿಹಳ್ಳಿಗಳಲ್ಲಿ ಚೆನ್ನಮ್ಮ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಗುಂಪುಗುಂಪಾಗಿ ನಿಂತು ಶ್ರದ್ಧಾಂಜಲಿ ಸಲ್ಲಿಸಿದ ದೃಶ್ಯಗಳು ಮನಕಲಕುವಂತಿದ್ದವು.

ಶ್ರದ್ಧಾಂಜಲಿ ವಾಹನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಾ. ಅನುಸೂಯ, ಸೂರಜ್ ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಚನ್ನರಾಯಪಟ್ಟಣ ಗಡಿಗೆ ಆಗಮಿಸಿದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕರಾದ ಪುಟ್ಟೇಗೌಡ, ಗೋಪಾಲಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು.

ಗಡಿಭಾಗದಿಂದ ಶ್ರದ್ಧಾಂಜಲಿ ರಥವು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳ್ಳೂರು ಕ್ರಾಸ್, ಕದಬಹಳ್ಳಿ, ಟೋಲ್, ಕಿರೀಸಾವೆ, ಹಿರೀಸಾವೆ, ಮಟ್ಟನವಿಲೆ, ಗೌಡಗೆರೆ ಹಾಗೂ ಶೆಟ್ಟಿಹಳ್ಳಿ ಮಾರ್ಗವಾಗಿ ಚನ್ನರಾಯಪಟ್ಟಣ ಪಟ್ಟಣದತ್ತ ಸಾಗಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ಅಂತಿಮ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಮಾಜಿ ಅಧ್ಯಕ್ಷ ಸಿ.ಎನ್. ಪುಟ್ಟಸ್ವಾಮಿಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ. ರಾಮಕೃಷ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಅಂತಿಮ ಗೌರವ ಅರ್ಪಿಸಿದರು.


ಮುಖ್ಯಾಂಶಗಳು

  • ರಾತ್ರಿ 8 ಗಂಟೆ ಸುಮಾರಿಗೆ ಚನ್ನರಾಯಪಟ್ಟಣ ಗಡಿಗೆ ಶ್ರದ್ಧಾಂಜಲಿ ವಾಹನ ಆಗಮನ
  • ಮಧ್ಯಾಹ್ನದಿಂದಲೇ ಸಾವಿರಾರು ಜನರು ಅಂತಿಮ ದರ್ಶನಕ್ಕಾಗಿ ಕಾದು ಕುಳಿತಿದ್ದರು
  • ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಭಾವಚಿತ್ರಗಳೊಂದಿಗೆ ಶ್ರದ್ಧಾಂಜಲಿ
  • ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರ ಉಪಸ್ಥಿತಿ
  • ಎಚ್.ಡಿ. ದೇವೇಗೌಡರಿಗೆ ಜನಪ್ರತಿನಿಧಿಗಳಿಂದ ಸಾಂತ್ವನ
  • ಮಾರ್ಗದುದ್ದಕ್ಕೂ ಸಾವಿರಾರು ಸಾರ್ವಜನಿಕರಿಂದ ಪುಷ್ಪನಮನ
error: Content is protected !!