23 C
Munich
Home News ಹಾಸನದಲ್ಲಿ ಐತಿಹಾಸಿಕ ಧಾರ್ಮಿಕ ಕ್ಷಣ: ಸಾವಿರಾರು ಭಕ್ತರಿಂದ ಏಕಕಾಲದಲ್ಲಿ ಶ್ರೀ ಹನುಮಾನ್ ಚಾಲೀಸಾ ಪಠಣ

ಹಾಸನದಲ್ಲಿ ಐತಿಹಾಸಿಕ ಧಾರ್ಮಿಕ ಕ್ಷಣ: ಸಾವಿರಾರು ಭಕ್ತರಿಂದ ಏಕಕಾಲದಲ್ಲಿ ಶ್ರೀ ಹನುಮಾನ್ ಚಾಲೀಸಾ ಪಠಣ

ಹಾಸನ, ಜು. 4 (www.kannadapost.com): ನಗರದ KSRTC ಡಿಪೋ ಸಮೀಪದ ಶ್ರೀ ಸಂಜೀವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಷ್ಟ್ರ ಸಂಕಲ್ಪದ ಅಂಗವಾಗಿ ಇದೇ ಮೊದಲ ಬಾರಿಗೆ ಸಾವಿರಾರು ಭಕ್ತರು ಏಕಕಾಲದಲ್ಲಿ ಶ್ರೀ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಅಪರೂಪದ ಹಾಗೂ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ದೂರದ ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಹನುಮ ಭಕ್ತರು ಕಳೆದ ಒಂದು ವಾರದಿಂದ ತಮ್ಮ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಹನುಮಾನ್ ಚಾಲೀಸಾ ಅಭ್ಯಾಸ ನಡೆಸಿ, ನಗರದ ರೈಲ್ವೆ ನಿಲ್ದಾಣದ ಸಮೀಪದ ಶ್ರೀ ಸಂಜೀವ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಏಕಕಾಲದಲ್ಲಿ ಪಠಣ ಮಾಡುವ ಮೂಲಕ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಆಧ್ಯಾತ್ಮಿಕ ಚಿಂತಕರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಶ್ರೀ ಜಗನ್ನಾಥ ಶಾಸ್ತ್ರಿ ಅವರು ಹನುಮಾನ್ ಚಾಲೀಸಾದ ಮಹತ್ವ ಹಾಗೂ ಸನಾತನ ಧರ್ಮದ ಶ್ರೇಷ್ಠತೆಯನ್ನು ವಿವರಿಸಿದರು. ಸಮಾಜದಲ್ಲಿ ಸನಾತನ ಧರ್ಮದ ಜಾಗೃತಿ ಮತ್ತು ಸಂಸ್ಕೃತಿ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಕರೆ ನೀಡಿದರು.

ಶ್ರೀ ಸಂಜೀವ ಆಂಜನೇಯ ಸ್ವಾಮಿ ಭಕ್ತ ಮಂಡಳಿಯ ಅಧ್ಯಕ್ಷ ಶ್ರೀ ತಿಪ್ಪೇಸ್ವಾಮಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ, ಭಕ್ತಿ ಮತ್ತು ರಾಷ್ಟ್ರಭಾವನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ದೇವಸ್ಥಾನದ ಅರ್ಚಕರಾದ ಶ್ರೀ ರಕ್ಷಿತ್ ಭಾರದ್ವಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ರಾಷ್ಟ್ರ ಸಂಕಲ್ಪದ ಮಹತ್ವವನ್ನು ವಿವರಿಸಿದರು.

ಈ ಧಾರ್ಮಿಕ ಸಮಾರಂಭದಲ್ಲಿ ಹಾಸನ ನಗರದ ವಿವಿಧ ಭಜನಾ ಮಂಡಳಿಗಳು, ಸಾವಿರಾರು ಮಾತೆಯರು, ಹನುಮ ಭಕ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತರು, ಸೇವಾ ಕಾರ್ಯಕರ್ತರು ಹಾಗೂ ದಾನಿಗಳಿಗೆ ಭಕ್ತ ಮಂಡಳಿಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.


ಮುಖ್ಯಾಂಶಗಳು

  • ಹಾಸನದಲ್ಲಿ ಇದೇ ಮೊದಲ ಬಾರಿಗೆ ಸಾವಿರಾರು ಭಕ್ತರಿಂದ ಏಕಕಾಲದಲ್ಲಿ ಹನುಮಾನ್ ಚಾಲೀಸಾ ಪಠಣ
  • ರಾಷ್ಟ್ರ ಸಂಕಲ್ಪದ ಅಂಗವಾಗಿ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ
  • ವಿಶ್ವ ಹಿಂದೂ ಪರಿಷತ್ ಮುಖಂಡ ಜಗನ್ನಾಥ ಶಾಸ್ತ್ರಿ ವಿಶೇಷ ಉಪನ್ಯಾಸ
  • ಸಾವಿರಾರು ಭಕ್ತರು, ಮಾತೆಯರು ಹಾಗೂ ಭಜನಾ ಮಂಡಳಿಗಳ ಭಾಗಿ
  • ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ವಿತರಣೆ
error: Content is protected !!