Hassan: ಗಾಳಿ ಸಹಿತ ತುಂತುರು ಮಳೆ; ಸರಗಳ್ಳಿ ಬಳಿ ರಸ್ತೆಗೆ ಮರಗಳು ಉರುಳಿ, ಉಚ್ಚಂಗಿ–ಕೆರೋಡಿ ರಸ್ತೆ ಬಂದ್

Hassan|ಹಾಸನ, ಜುಲೈ 4: ಮಲೆನಾಡು ಭಾಗದಲ್ಲಿ ಶನಿವಾರ ಬೆಳಗ್ಗಿನಿಂದ ಗಾಳಿ ಸಹಿತ ತುಂತುರು ಮಳೆ ಸುರಿಯುತ್ತಿದ್ದು, ಹಲವು ಕಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಸಕಲೇಶಪುರ ತಾಲೂಕಿನ ಸರಗಳ್ಳಿ ಗ್ರಾಮದ ಸಮೀಪ ಭಾರಿ ಗಾಳಿಯ ಹೊಡೆತಕ್ಕೆ ದೊಡ್ಡ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಹುಚ್ಚಂಗಿ–ಕೆರೋಡಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬೆಳಗ್ಗಿನಿಂದಲೇ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ರಸ್ತೆ ಸಂಚಾರವನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಮಲೆನಾಡು ಭಾಗದಲ್ಲಿ ಗಾಳಿ ಮತ್ತು ಮಳೆಯ ತೀವ್ರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಕೈಗೊಳ್ಳಬೇಕು ಹಾಗೂ ಅರಣ್ಯ ಪ್ರದೇಶ ಮತ್ತು ಮರಗಳ ಸಮೀಪ ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.