ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ವೇಗ ನೀಡಿದೆ. ಮೆಜೆಸ್ಟಿಕ್ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಜೆಸಿಬಿ ಮೂಲಕ ಅಂಗಡಿಗಳು, ಶೆಡ್‌ಗಳು ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದ್ದು, ಇದಕ್ಕೆ ಬೀದಿ ಬದಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಹೊಟ್ಟೆಪಾಡಿನ ಗತಿ ಏನು?” – ವ್ಯಾಪಾರಿಗಳ ಕಣ್ಣೀರು
ಮೆಜೆಸ್ಟಿಕ್‌ನಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳು, ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
“40 ವರ್ಷಗಳಿಂದ ಇಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ಈಗ ದಿಢೀರ್ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಬದುಕು ನಡೆಸುವುದು ಹೇಗೆ?” ಎಂದು ವ್ಯಾಪಾರಿಗಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಕೆಲವರು ಪಾಲಿಕೆ ಸಿಬ್ಬಂದಿಗೆ ಹಿಡಿಶಾಪ ಹಾಕಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಜೆಸಿಬಿ ಮೂಲಕ ಒತ್ತುವರಿ ತೆರವು
ಬೆಳ್ಳಂಬೆಳಗ್ಗೆ ಆರಂಭವಾದ ಕಾರ್ಯಾಚರಣೆಯಲ್ಲಿ ಜೆಸಿಬಿ ಬಳಸಿ ಫುಟ್‌ಪಾತ್ ಮೇಲಿದ್ದ ಅಂಗಡಿಗಳು, ತಾತ್ಕಾಲಿಕ ನಿರ್ಮಾಣಗಳು ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.
ಅಶೋಕ್ ಪಿಲ್ಲರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲವು ಹೋಟೆಲ್‌ಗಳು ಫುಟ್‌ಪಾತ್‌ಗಳನ್ನು ಗ್ರಾಹಕರ ಆಸನ ವ್ಯವಸ್ಥೆಗೆ ಬಳಸಿಕೊಂಡಿದ್ದ ಸ್ಥಳಗಳನ್ನೂ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.
ಈ ಪ್ರದೇಶಗಳಲ್ಲಿ ಕಾರ್ಯಾಚರಣೆ
ಬಿಬಿಎಂಪಿ ಕೇಂದ್ರ ವಲಯದಲ್ಲಿ ಈ ಕೆಳಗಿನ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ:
- ಟ್ರಿನಿಟಿ ಜಂಕ್ಷನ್‌ನಿಂದ ಎಂ.ಜಿ. ರಸ್ತೆ ಹಾಗೂ ಎಂ.ಜಿ. ಉದ್ಯಾನದವರೆಗೆ
- 100 ಅಡಿ ಇಂದಿರಾನಗರ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್‌ವರೆಗೆ
- ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆಯವರೆಗೆ
- ಅಶೋಕ್ ಪಿಲ್ಲರ್‌ನಿಂದ ಮದಾಚನ್ ಪಾರ್ಕ್‌ವರೆಗೆ
- ಜಯನಗರ 8ನೇ ಮುಖ್ಯರಸ್ತೆ ಹಾಗೂ 9ನೇ ಮುಖ್ಯರಸ್ತೆ (ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡರಸ್ತೆವರೆಗೆ)
- ಆರ್.ವಿ. ರಸ್ತೆ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್‌ವರೆಗೆ
ಮತ್ತೆ ಒತ್ತುವರಿ ಮಾಡಿದರೆ ₹50 ಸಾವಿರ ದಂಡ
ಬೆಂಗಳೂರು ಕೇಂದ್ರ ವಲಯದ ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ, ಈಗಾಗಲೇ ಮುಂಚಿತವಾಗಿ ನೋಟಿಸ್ ನೀಡಲಾಗಿತ್ತು. ಸ್ವಯಂ ತೆರವು ಮಾಡದ ಕಾರಣ ಪಾಲಿಕೆಯೇ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.
ಇನ್ನು ಮುಂದೆ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಅಂಗಡಿ ಅಥವಾ ಒತ್ತುವರಿ ಕಂಡುಬಂದರೆ ₹50 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ನಾಳೆಯಿಂದ ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಪರಿಶೀಲನೆ ನಡೆಸಲಿದ್ದು, ಮರು ಒತ್ತುವರಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.











