Bengaluru: ಹಾಸನ ಐಐಟಿ ಭೂ ಸಂತ್ರಸ್ತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ: CM DK Shivakumar

Bengaluru|ಬೆಂಗಳೂರು (Kannada Post): ಹಾಸನದಲ್ಲಿ ಉದ್ದೇಶಿತ ಐಐಟಿ (IIT) ಸ್ಥಾಪನೆ ಯೋಜನೆಗೆ ಭೂಮಿ ಕಳೆದುಕೊಂಡಿರುವ ಸಂತ್ರಸ್ತ ರೈತರಿಗೆ ನ್ಯಾಯಾಲಯದ ಆದೇಶದಂತೆ ಶೀಘ್ರವೇ ಪರಿಹಾರ ಕಲ್ಪಿಸುವ ಭರವಸೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದರು.

​ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಿಎಂ ಸಭೆ ನಡೆಸಿ ಅಹವಾಲು ಆಲಿಸಿದರು. ಸುಮಾರು ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ಬಗೆಹರಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಮುಖ ಮುಖ್ಯಾಂಶಗಳು:

  • ​ಐಐಟಿ ನೆಪದಲ್ಲಿ ‘ಎಚ್.ಡಿ.ದೇವೇಗೌಡ ಎಜುಕೇಷನ್ ಟ್ರಸ್ಟ್’ಗೆ ಭೂಕಬಳಿಕೆ ಮಾಡಲಾಗಿದೆ ಎಂದು ರೈತರ ಗಂಭೀರ ಆರೋಪ.
  • ​ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಮ್ಮಕ್ಕಿನಿಂದ ಅಧಿಕಾರಿಗಳಿಂದ ಕಿರುಕುಳ ಹಾಗೂ ಅಲೆದಾಟ.
  • ​”ನಾನು ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡುವುದಿಲ್ಲ” ಎಂದ ಸಿಎಂ.
  • ​ಕೋರ್ಟ್ ಆದೇಶದಂತೆ 50:50 ಅನುಪಾತದಲ್ಲಿ ನಿವೇಶನ ನೀಡಲು ಅಥವಾ ಜಮೀನು ಡಿನೋಟಿಫೈ ಮಾಡಲು ರೈತರ ಪಟ್ಟು.

ದೇವೇಗೌಡರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ

​ದೊಡ್ಡಹೊನ್ನೇನಹಳ್ಳಿ, ಕಾಚನಾಯಕನಹಳ್ಳಿ ಸೇರಿ ಯೋಜನಾ ವ್ಯಾಪ್ತಿಯ ಏಳು ಗ್ರಾಮಗಳ ರೈತರು ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು. “ಐಐಟಿ ಧಾರವಾಡಕ್ಕೆ ಹೋಗಿದೆ. ಆದರೆ, ಅದರ ಹೆಸರಿನಲ್ಲಿ ಎಚ್.ಡಿ.ದೇವೇಗೌಡ ಎಜುಕೇಷನ್ ಟ್ರಸ್ಟ್ ಮಾಡಲು ನಮ್ಮ ಭೂಮಿಯನ್ನು ಕಬಳಿಸುವ ಸಂಚು ನಡೆದಿದೆ. ಆರಂಭದಲ್ಲಿ 334 ಎಕರೆ ಎಂದವರು, ಈಗ 1057 ಎಕರೆ ಎನ್ನುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಚ್.ಡಿ. ರೇವಣ್ಣ ಅವರ ಕುಮ್ಮಕ್ಕಿನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ನಾವು ನಿರಂತರ ತೊಂದರೆ ಅನುಭವಿಸುತ್ತಿದ್ದೇವೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯದ ಆದೇಶ ಉಲ್ಲಂಘನೆ ಹಾಗೂ ರೈತರ ಪರದಾಟ ಎಂದು ಅಸಮಾಧಾನ:

​ಸುಮಾರು 20 ವರ್ಷಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ರೈತರಿಗೆ ನ್ಯಾಯಾಲಯ ತೀರ್ಪು ನೀಡಿದ್ದರೂ ಪರಿಹಾರ ಸಿಕ್ಕಿಲ್ಲ. “ವರ್ಷಕ್ಕೆ ಎರಡು ಬಾರಿ ನೋಟಿಸ್ ಕೊಟ್ಟು ಹಾಸನ, ಮೈಸೂರು ಎಂದು ಅಲೆದಾಡಿಸುತ್ತಾರೆ. ಸೈಟ್ ಕೇಳಿದರೆ ಲಭ್ಯವಿಲ್ಲ ಎನ್ನುತ್ತಾರೆ. 2007ರಲ್ಲಿ ಎಕರೆಗೆ ಕೇವಲ 15 ರಿಂದ 25 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ, ಇಂದು ಆ ಜಾಗದ ಅಕ್ಕಪಕ್ಕದಲ್ಲಿ ಅಡಿಗೆ 7-8 ಸಾವಿರ ರೂ. ಬೆಲೆ ಇದೆ. ರೇವಣ್ಣ ಸೇರಿ ಜೆಡಿಎಸ್ ಮುಖಂಡರು ಅಲ್ಲಿ ಕೈಗಾರಿಕೆಗಳನ್ನು ಮಾಡಲು ಹೊರಟಿದ್ದಾರೆ. ನಮಗೆ ಪರಿಹಾರವೂ ಬೇಡ, ಸೈಟೂ ಬೇಡ; ನಮ್ಮ ಜಮೀನನ್ನು ಡಿನೋಟಿಫೈ ಮಾಡಿ ವಾಪಸ್ ಕೊಡಿ” ಎಂದು ರೈತರು ಸಿಎಂಗೆ ಮನವಿ ಮಾಡಿದರು.

ಶಾಸಕ ಶಿವಲಿಂಗೇಗೌಡ ಹೇಳಿಕೆ

​ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, “ಕೋರ್ಟ್ ನಿರ್ದೇಶನದಂತೆ 50:50 ಶೇರಿಂಗ್ ನೀಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ (NH) ಹೊಂದಿಕೊಂಡಿರುವ ಆ ಬೆಲೆಬಾಳುವ ಜಾಗ ರೈತರಿಗೆ ಸಿಗುತ್ತದೆ ಎಂದು ಅದನ್ನು ದೋಚಲು ಕೆಲವರು ಮುಂದಾಗಿದ್ದಾರೆ. ಒಂದು ವೇಳೆ ಹಾಸನಕ್ಕೆ ಐಐಟಿ ತರುವುದಾದರೆ 350 ಎಕರೆ ಕೊಡಿಸುತ್ತೇವೆ, ರೈತರ ಕೈಕಾಲು ಹಿಡಿಯುತ್ತೇವೆ. ಆದರೆ ಐಐಟಿ ನೆಪದಲ್ಲಿ ಕಿರುಕುಳ ಬೇಡ” ಎಂದರು.

ನ್ಯಾಯಯುತ ಪರಿಹಾರದ ಭರವಸೆ ನೀಡಿದ ಡಿ.ಕೆ. ಶಿವಕುಮಾರ್

​ರೈತರ ಸಮ್ಮುಖದಲ್ಲೇ ಅಧಿಕಾರಿಗಳಿಂದ ನಕ್ಷೆ ಮತ್ತು ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲಿಸಿದ ಮುಖ್ಯಮಂತ್ರಿಗಳು, ರೈತರೊಂದಿಗೆ ಚರ್ಚಿಸಿದರು.

​”ಸರ್ಕಾರ ಸದಾ ರೈತರ ಪರವಾಗಿರುತ್ತದೆ. ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಒದಗಿಸುವ ಪ್ರಶ್ನೆಯೇ ಇಲ್ಲ. ರೈತರ ಕೈಗೆ ಹೆಚ್ಚಿಗೆ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು. ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ, ನ್ಯಾಯಸಮ್ಮತವಾಗಿ ಬಗೆಹರಿಸಲಾಗುವುದು.”

– ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

​ಬಾಕಿ ಉಳಿದಿರುವ ವಿಷಯಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಶೀಘ್ರವೇ ಪರಿಹಾರ ಮಾರ್ಗ ಕಂಡುಹಿಡಿಯುವುದಾಗಿ ಸಿಎಂ ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದವರು:

ಸಭೆಯಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.