ಬೆಂಗಳೂರು : ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಹಾಗೂ ಪ್ರಗತಿಪರ ಚಿಂತಕ ಕೆ.ಟಿ. ಶಿವಪ್ರಸಾದ್ (79) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಅವರು ದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದರು. ಅವರು ಹಾಸನ ನಗರದಲ್ಲಿ ಪತ್ನಿ ಸುವರ್ಣ ಅವರೊಂದಿಗೆ ವಾಸವಾಗಿದ್ದರು.
ರೈತ ಹಾಗೂ ದಲಿತ ಚಳವಳಿಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದ್ ಅವರು ತಮ್ಮ ಚಿತ್ರಕಲೆ ಮೂಲಕ ಸಾಮಾಜಿಕ ಬದ್ಧತೆ ಮತ್ತು ಪ್ರಗತಿಪರ ಚಿಂತನೆಗಳನ್ನು ಅಭಿವ್ಯಕ್ತಿಸಿದ ಅಪರೂಪದ ಕಲಾವಿದರಾಗಿದ್ದರು.
ಖ್ಯಾತ ಉದ್ಯಮಿ ಕಾರ್ಲೆ ಅವರ ಪುತ್ರರಾಗಿದ್ದ ಅವರು, ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಸ್ನೇಹಿತರಾಗಿಯೂ ಪರಿಚಿತರಾಗಿದ್ದರು. ಅವರ ನಿಧನದಿಂದ ಕರ್ನಾಟಕದ ಕಲಾ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
*ಶಿವಾನಂದ ತಗಡೂರು ಸಂತಾಪ**
ಕೆ.ಟಿ. ಶಿವಪ್ರಸಾದ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಕೆ.ಟಿ. ಶಿವಪ್ರಸಾದ್ ಅವರು ಕೇವಲ ಪ್ರತಿಭಾವಂತ ಚಿತ್ರಕಲಾವಿದರಷ್ಟೇ ಅಲ್ಲ, ಸಮಾಜಮುಖಿ ಚಿಂತನೆಗಳನ್ನು ತಮ್ಮ ಕಲೆಯ ಮೂಲಕ ಜನರಿಗೆ ತಲುಪಿಸಿದ ಅಪರೂಪದ ಸೃಜನಶೀಲ ವ್ಯಕ್ತಿತ್ವವಾಗಿದ್ದರು.
ಅವರ ನಿಧನದಿಂದ ಕರ್ನಾಟಕದ ಸಾಂಸ್ಕೃತಿಕ ಮತ್ತು ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ” ಎಂದು ಅವರು ಪ್ರಾರ್ಥಿಸಿದ್ದಾರೆ.











