Arsikere: ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕರಪತ್ರ ಹಂಚಿಕೆ; ಕಿಡಿಗೇಡಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ ಶಾಸಕ!

 Arsikere|ಅರಸೀಕೆರೆ: ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ವಿರುದ್ಧ ಗಂಭೀರ ಆರೋಪಗಳನ್ನು ಒಳಗೊಂಡ ಕರಪತ್ರಗಳನ್ನು ‘ಅಖಿಲ ಭಾರತ ವೀರಶೈವ ಮಹಾಸಭಾ’ ಹೆಸರಿನಲ್ಲಿ ಅಪರಿಚಿತರು ಪಟ್ಟಣದಲ್ಲಿ ಮನೆ-ಮನೆಗೆ ಹಂಚಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಶಾಸಕರು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರಪತ್ರದಲ್ಲಿರುವ ಪ್ರಮುಖ ಆರೋಪಗಳೇನು?

  • ಸಮಾಜ ನಿಂದನೆ: ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ತಮ್ಮ ಅಧಿಕಾರಾವಧಿಯಲ್ಲಿ ವೀರಶೈವ ಸಮಾಜವನ್ನು ನಿಂದಿಸಿದ್ದಾರೆ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
  • ಸಮಾಜ ಒಡೆಯುವ ಯತ್ನ: ವೀರಶೈವ ಸಮಾಜವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರುವ ಅವರು, ಉಪಜಾತಿಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ.
  • ಭ್ರಷ್ಟಾಚಾರದ ಆರೋಪ: ಶಾಸಕರಾಗಿ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಸಂಪಾದನೆ ಮಾಡಿರುವ ಅವರು, ಬೆಂಗಳೂರಿನಲ್ಲಿ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ.
  • ಮಾಜಿ ಶಾಸಕರಿಗೆ ಅವಮಾನ: “ಈ‌ ಹಿಂದಿನ ಲಿಂಗಾಯತ ಸಮಾಜಕ್ಕೆ ಸೇರಿದ ಶಾಸಕರುಗಳೆಲ್ಲಾ ಏನೂ ಕೆಲಸವನ್ನೇ ಮಾಡಿಲ್ಲ, ಅವರೆಲ್ಲಾ ಹೊಟ್ಟೆಪಾಡಿನ ಶಾಸಕರುಗಳು” ಎಂದು ಜರಿದಿದ್ದಾರೆ.
  • ಗುಲಾಮಗಿರಿ: ಇಂದು ಅರಸೀಕೆರೆಯಲ್ಲಿ ಶಾಸಕರ ಸಂಬಂಧಿಕರಿಗೆ ಜನಸಾಮಾನ್ಯರು ಗುಲಾಮರಂತೆ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.
  • ಹಲ್ಲೆ ಯತ್ನ: ಕ್ಷೇತ್ರದ ಪರಾಜಿತ ಅಭ್ಯರ್ಥಿ ಎನ್.ಆರ್. ಸಂತೋಷ್ ಅವರ ಮೇಲೂ ಶಾಸಕರು ಹಲ್ಲೆಗೆ ಮುಂದಾಗಿದ್ದರು.

​ಕರಪತ್ರದ ಕೊನೆಯಲ್ಲಿ, “ಎಚ್ಚರವಾಗಿ ಅಣ್ಣಾ ಬಸವಣ್ಣನವರ ಅನುಯಾಯಿಗಳೇ… 2028ಕ್ಕೆ ಅರಸೀಕೆರೆ ಅನುಭವ ಮಂಟಪವಾಗಲೇಬೇಕು” ಎಂಬ ಘೋಷವಾಕ್ಯಗಳೊಂದಿಗೆ ಸಾರ್ವಜನಿಕರನ್ನು ಪ್ರಚೋದಿಸುವ ಯತ್ನ ಮಾಡಲಾಗಿದೆ.

ಶಾಸಕರಿಂದ ದೂರು ದಾಖಲು:

ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಬಿತ್ತಿಪತ್ರ ಹಂಚಿರುವ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕರಪತ್ರ ಹಂಚಿದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.