Arsikere| ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಕಾತ್ಯಾಯಿನಿ ಅಮಾವಾಸ್ಯೆ ಅಂಗವಾಗಿ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆಯು ಸೋಮವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ, ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಜಗನ್ಮಾತೆ ಶ್ರೀ ಸ್ವರ್ಣ ಗೌರಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ, ಜೂನ್ 15ರಂದು ಸಂಜೆ ಶ್ರೀ ಚೇತನ್ ಮರಿದೇವರ ಪಾದಪೂಜೆಯು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅತ್ಯಂತ ಶಾಸ್ತ್ರೋಕ್ತವಾಗಿ ಹಾಗೂ ಭಕ್ತಿಭಾವದಿಂದ ನೆರವೇರಿತು.
ಸಜ್ಜನರ ಆಪತ್ತು, ದುರ್ಜನರ ಸಂಪತ್ತು ಶಾಶ್ವತವಲ್ಲ:
ಪಾದಪೂಜೆಯ ನಂತರ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಚೇತನ್ ಮರಿದೇವರು, “ಮನುಷ್ಯನ ನಡೆ, ನುಡಿ, ಆಚಾರ, ವಿಚಾರಗಳು ಸದಾ ಸತ್ಯದ ಪರವಾಗಿರಬೇಕು. ಸಜ್ಜನರಿಗೆ ಬರುವ ಆಪತ್ತು ಹಾಗೂ ದುರ್ಜನರಿಗೆ ಬರುವ ಸಂಪತ್ತು ಯಾವುದು ಕೂಡ ಬಹಳ ದಿನ ಉಳಿಯುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
”ಮನುಷ್ಯನಿಗೆ ಶಿವಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ನಿಜವಾದ ಶ್ರೀಗುರು. ಮನುಷ್ಯನ ಜೀವನ ಉತ್ತಮವಾಗಿ ಸಾಗಲು ಗುರುವಿನ ಕಾರುಣ್ಯದ ಕಿರಣ ಬಹಳ ಮುಖ್ಯ. ಭಕ್ತನ ಹೃದಯವೇ ಭಗವಂತ ನೆಲೆಸಿರುವ ಗುಡಿಯಾಗಿದೆ” ಎಂದು ಅವರು ತಿಳಿಸಿದರು.
ಬಳಿಕ, ಶ್ರೀ ಸ್ವರ್ಣ ಗೌರಮ್ಮ ದೇವಿ, ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿದರು.
ಕಣ್ಮನ ಸೆಳೆದ ದೀಪಾಲಂಕಾರ, ಭಕ್ತರಿಗೆ ದಾಸೋಹ:
ಅಮಾವಾಸ್ಯೆ ನಿಮಿತ್ತ ದೇವಾಲಯವನ್ನು ತಳಿರು-ತೋರಣ ಹಾಗೂ ಬಾಳೆಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತ್ತು. ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರವು ಭಕ್ತರ ಕಣ್ಮನ ಸೆಳೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಈರೇಗೌಡರ ಶಿವಲಿಂಗಪ್ಪ ಮತ್ತು ಮಕ್ಕಳು ಅನ್ನದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಸೀತಾಪುರ, ಕೊಪ್ಪಲು, ಯರೇಹಳ್ಳಿ, ಸಸಿವಾಳ, ರಾಂಪುರ, ಡಿ.ಎಂ. ಕುರ್ಕೆ, ಹಾರನಹಳ್ಳಿ, ಅಣ್ಣನಾಯಕನಹಳ್ಳಿ, ನಾಗತಿಹಳ್ಳಿ, ವೈಜಿಹಳ್ಳಿ, ಪಿ. ಹೊಸಳ್ಳಿ, ಕಿತ್ತನಕೆರೆ, ದೋಣಕಟ್ಟೆ, ಬೊಮ್ಮಸಮುದ್ರ, ಶಂಕರನಹಳ್ಳಿ, ಕಡಲೂರು ಮುಂತಾದ ಕಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತರಾದರು.










