Hassan|ಹಾಸನ: ಪ್ರವಾಸಕ್ಕೆಂದು ಬಂದು, ಈಜಲು ನದಿಗೆ ಇಳಿದಿದ್ದ ಬೆಂಗಳೂರು ಮೂಲದ ಮೂವರು ಯುವಕರು ನೀರುಪಾಲಾಗಿರುವ ದಾರುಣ ಘಟನೆ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕರನ್ನು ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಬೆಂಗಳೂರು ಮೂಲದ ಒಟ್ಟು ಹತ್ತು ಜನ ಯುವಕರ ತಂಡವೊಂದು ಟಿಟಿ (TT) ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ, ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ಪ್ರಸಿದ್ಧ ‘ಶೆಟ್ಟಿಹಳ್ಳಿ ಚರ್ಚ್’ ವೀಕ್ಷಿಸಲು ಬಂದಿದ್ದರು. ಈ ವೇಳೆ ಚರ್ಚ್ ಬಳಿಯ ಹೇಮಾವತಿ ನದಿಯ ಹಿನ್ನೀರಿನಲ್ಲಿ ಯುವಕರು ಈಜಲು ನೀರಿಗೆ ಇಳಿದಿದ್ದಾರೆ.
ಕಣ್ಮುಂದೆಯೇ ಮುಳುಗಿದ ಸ್ನೇಹಿತರು:
ನೀರಿಗೆ ಇಳಿದ ಯುವಕರಲ್ಲಿ ಮೃತಪಟ್ಟ ಮೂವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳದ ಅರಿವಿಲ್ಲದೆ ಇಳಿದ ಪರಿಣಾಮ ಚರಣ್, ಮಿಲನ್ ಮತ್ತು ಮಣಿಕಂಠ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಮ್ಮ ಮೂವರು ಸ್ನೇಹಿತರು ಕಣ್ಮುಂದೆಯೇ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಗೊಂಡ ಉಳಿದ ಸ್ನೇಹಿತರು, ಕೂಡಲೇ ದಡಕ್ಕೆ ಬಂದು ರಕ್ಷಣೆಗಾಗಿ ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಮೂವರೂ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶವಕ್ಕಾಗಿ ಮುಂದುವರಿದ ಶೋಧಕಾರ್ಯ:
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೊರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಯುವಕರ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ನದಿಯಲ್ಲಿ ತೀವ್ರ ಶೋಧಕಾರ್ಯ ನಡೆಯುತ್ತಿದೆ.
ಈ ದುರ್ಘಟನೆಯು ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವಾಸಕ್ಕೆಂದು ನಗುನಗುತ್ತಾ ತೆರಳಿದ್ದ ಯುವಕರು ಹೆಣವಾಗಿರುವ ಸುದ್ದಿ ಅವರ ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.










