Hassan|ಬೇಲೂರು (ಹಲ್ಮಿಡಿ): “‘ಅಕ್ಷರಂ ಪರಂ ಬ್ರಹ್ಮ’, ಯಾವುದಕ್ಕೆ ಚರವಿಲ್ಲವೋ, ನಾಶವಿಲ್ಲವೋ ಅದೇ ಅಕ್ಷರ. ವ್ಯಕ್ತಿ ನಾಶವಾಗಬಹುದು, ಆದರೆ ಆತ ಅಕ್ಷರದ ಮುಖಾಂತರ ಗಳಿಸುವ ಜ್ಞಾನ ಎಂದಿಗೂ ನಾಶವಾಗುವುದಿಲ್ಲ. ಪೋಷಕರು ಮಕ್ಕಳ ಆಸಕ್ತಿಯನ್ನು ಅರಿತು ಕಲಿಯಲು ಮುಕ್ತ ಅವಕಾಶ ಕಲ್ಪಿಸಬೇಕು” ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ ಅಭಿಪ್ರಾಯಪಟ್ಟರು.
ಅವರು ಬೇಲೂರು ತಾಲ್ಲೂಕಿನ, ಪಡುವಣ ಘಟ್ಟಗಳ ಮೆಟ್ಟಿಲು ಹಾಗೂ ಶಿಲ್ಪಕಲೆಗಳ-ಶಾಸನಗಳ ತೊಟ್ಟಿಲಾದ ಐತಿಹಾಸಿಕ ‘ಹಲ್ಮಿಡಿ’ಯ ಶಿಲಾಶಾಸನ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸ್ಕಾಲರ್ಸ್ ಶಾಲೆಯ 15ನೇ ವರ್ಷದ ‘ಅಕ್ಷರಾಭ್ಯಾಸ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
”ಜಗತ್ತಿಗೆ ಜ್ಞಾನ ಮತ್ತು ವಿವೇಕವನ್ನು ನೀಡಿದ ಶ್ರೇಷ್ಠ ಭಾಷೆ ಕನ್ನಡ. ಬರವಣಿಗೆಯನ್ನು ರೂಪಿಸಿಕೊಳ್ಳುವ ಭಾಷೆಗಳಲ್ಲಿ ಶ್ರೇಷ್ಠ ತತ್ವವನ್ನು ಹೊಂದಿರುವ ಕನ್ನಡ ಭಾಷೆ ಮೊದಲು ಅರಳಿದ ಐತಿಹಾಸಿಕ ಸ್ಥಳವಿದು. ಇಂತಹ ಪುಣ್ಯ ಸ್ಥಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವ ಪೋಷಕರೇ ಧನ್ಯರು. ವಿದ್ಯಾರ್ಥಿಗಳು ಕೇವಲ ಶಾಲೆಯಿಂದ ಮಾತ್ರವಲ್ಲದೆ, ಶಿಕ್ಷಕರು, ಪೋಷಕರು ಹಾಗೂ ತಮ್ಮ ಸುತ್ತಲಿನ ಪರಿಸರದಿಂದಲೂ ಜ್ಞಾನದ ಅರಿವನ್ನು ಪಡೆಯುತ್ತಾರೆ. ಹೀಗಾಗಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವಾಗಬೇಕು” ಎಂದು ಕಿವಿಮಾತು ಹೇಳಿದರು.
ಸ್ಕಾಲರ್ಸ್ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಮಾತನಾಡಿ, “ಎಲ್ಲ ಮಕ್ಕಳ ನಾಲಿಗೆಯಲ್ಲಿ ಸದಾ ಸರಸ್ವತಿಯು ನಲಿದಾಡುವಂತಾಗಲಿ” ಎಂದು ಶುಭಕೋರಿದರು.

85 ವಿದ್ಯಾರ್ಥಿಗಳಿಗೆ ಅಕ್ಷರ ದೀಕ್ಷೆ
ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣ ಪದ್ಧತಿಗೆ ತನ್ನದೇ ಆದ ಅರ್ಥಪೂರ್ಣ ಸಂಸ್ಕಾರ ಹಾಗೂ ಸುಂದರ ಚೌಕಟ್ಟಿದೆ. ಗುರು-ಶಿಷ್ಯರ ನಡುವಿನ ಅವಿನಾಭಾವ ಸಂಬಂಧಕ್ಕೆ ಪ್ರೀತಿ ಮತ್ತು ಭಕ್ತಿಯ ಬಂಧವಿದೆ. ಇಂತಹ ವಿದ್ಯಾಭ್ಯಾಸವನ್ನು ಮಂಗಳ ಮುಹೂರ್ತದಲ್ಲಿ ಆರಂಭಿಸುವ ಪವಿತ್ರ ‘ಅಕ್ಷರಾಭ್ಯಾಸ’ ಕಾರ್ಯಕ್ರಮದಲ್ಲಿ ಸ್ಕಾಲರ್ಸ್ ಶಾಲೆಗೆ ಹೊಸದಾಗಿ ದಾಖಲಾದ 85 ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಇದಕ್ಕೂ ಮುನ್ನ ವಿದ್ಯೆಯ ಅಧಿದೇವತೆ ಶಾರದಾಂಬೆಯನ್ನು ಸ್ಮರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಮತಾ ಚಂದ್ರಶೇಖರ್, ನೂರಾರು ಪೋಷಕರು ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.










