ಅರಸೀಕೆರೆ: ಮಾಜಿ ಸಚಿವ zameer ಜಮೀರ್ ಅಹಮದ್ ಖಾನ್ (Zameer Ahmed Khan) ವಿರುದ್ಧ ಪಿತೂರಿ ನಡೆದಿದೆ ಎಂಬ ಆರೋಪಗಳ ನಡುವೆ, ಅರಸೀಕೆರೆ ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಅವರು ಜಮೀರ್ ಅಹಮದ್ ಪರವಾಗಿ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅರಸೀಕೆರೆ ಪಟ್ಟಣದ ಅಲ್ ಅಮೀನ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಅವರ ವಿರುದ್ಧ ನಡೆಯುತ್ತಿರುವುದು ಅಪಪ್ರಚಾರವಾಗಿದ್ದು, ಸತ್ಯಾಂಶಗಳು ಮರೆಮಾಚಲ್ಪಡುತ್ತಿವೆ ಎಂದು ಅಭಿಪ್ರಾಯಪಟ್ಟರು.
“ಜಮೀರ್ ಸಾಹೇಬ್ರಿಗೆ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದು ಕೇವಲ ಪ್ರಚಾರವಲ್ಲ, ಅಪಪ್ರಚಾರ. ಅಪಪ್ರಚಾರ ಮೊದಲೇ ಬಂದು ಎಲ್ಲಾ ವಿಚಾರಗಳನ್ನು ಮುಚ್ಚಿಹಾಕುತ್ತಿದೆ” ಎಂದು ಕೋಡಿ ಶ್ರೀ ಹೇಳಿದರು.
ಜಮೀರ್ ಅಹಮದ್ ಅವರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದ ಸ್ವಾಮೀಜಿ, “ಅವರು ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಅವರೊಂದಿಗೆ ಶಾಸಕ K. M. Shivalinge Gowda ಅವರೂ ಇರುತ್ತಾರೆ. ಈ ಬಗ್ಗೆ ನಾನು ಸಂಬಂಧಪಟ್ಟವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಮುಂದೆಯೂ ಮಾತನಾಡುತ್ತೇನೆ” ಎಂದು ತಿಳಿಸಿದರು.
“ಜಮೀರ್ ಇಲ್ಲದ ಸರ್ಕಾರ ಅಲ್ಲ, ಜಮೀರ್ ಇದ್ದರೆ ಸರ್ಕಾರ. ಆ ದೃಷ್ಟಿಯಿಂದ ಅವರು ಮತ್ತೆ ಮಂತ್ರಿಮಂಡಲಕ್ಕೆ ಸೇರುತ್ತಾರೆ. ಯಾವುದೇ ಆಕ್ರೋಶಕ್ಕೆ ಒಳಗಾಗದೆ ಶಾಂತಿಯಿಂದ ಇರಬೇಕು” ಎಂದು ಅವರು ಬೆಂಬಲಿಗರಿಗೆ ಕರೆ ನೀಡಿದರು.
ಜಮೀರ್ ಅಹಮದ್ ಅವರು ಜಾತ್ಯಾತೀತವಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದ ಕೋಡಿ ಶ್ರೀ, “ಅವರಿಗೆ ಭಗವಂತನ ಕೃಪೆ ಇದೆ. ಅವರು ಮತ್ತೆ ರಾಜ್ಯದ ಸಚಿವರಾಗುವುದನ್ನು ನಾವು ನೋಡುತ್ತೇವೆ. ಸಚಿವರಾದ ಬಳಿಕ ಜಮೀರ್ ಅಹಮದ್ ಹಾಗೂ ಶಿವಲಿಂಗೇಗೌಡರನ್ನು ಕೋಡಿಮಠಕ್ಕೆ ಕರೆಸಿ ಸನ್ಮಾನ ಮಾಡುತ್ತೇವೆ” ಎಂದು ಹೇಳಿದರು.
– kannadapost.com










