12.7 C
Munich
Home News ಕೊಡಗಿನಲ್ಲಿ ಕಾಡಾನೆ ದಾಳಿ: ನಿವೃತ್ತ ಐಜಿಪಿ ಪತ್ನಿ ಸಂಧ್ಯಾ ಬಲಿ

ಕೊಡಗಿನಲ್ಲಿ ಕಾಡಾನೆ ದಾಳಿ: ನಿವೃತ್ತ ಐಜಿಪಿ ಪತ್ನಿ ಸಂಧ್ಯಾ ಬಲಿ

ಕೊಡಗು ಜಿಲ್ಲೆಯ ತಿತಿಮತಿ ಸಮೀಪ ಕಾಡಾನೆ ದಾಳಿ ನಡೆದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ
ಕೊಡಗಿನಲ್ಲಿ ಕಾಡಾನೆ ದಾಳಿಗೆ ಬಲಿಯಾದ ಸಂಧ್ಯಾ; ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು.

ಕೊಡಗು, ಜೂನ್ 5,(www.kannadapost.com): ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮತ್ತೊಂದು ಅಮಾಯಕ ಜೀವವನ್ನು ಬಲಿ ಪಡೆದಿದೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (51) ಅವರು ಕಾಡಾನೆ ದಾಳಿಯಲ್ಲಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ನಡೆದಿದೆ.

ತಿತಿಮತಿ ಸಮೀಪದ ಕೋಣನಕಟ್ಟೆಯಲ್ಲಿರುವ ತಮ್ಮ ಕಾಫಿ ತೋಟವನ್ನು ವೀಕ್ಷಿಸಲು ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಸಂಧ್ಯಾ ತೆರಳಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಅವರೊಂದಿಗೆ ಇದ್ದ ಇಬ್ಬರು ಕಾರ್ಮಿಕರು ಸ್ಥಳದಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ತಕ್ಷಣ ಗೋಣಿಕೊಪ್ಪಲಿನ ಲೋಪಾಮುದ್ರಾ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಎಸಿಎಫ್ ಲಕ್ಷ್ಮಿಕಾಂತ್, ಆರ್‌ಎಫ್‌ಒ ದೇವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಡಾನೆ ದಾಳಿಯಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಮನೆಮಾಡಿದ್ದು, ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಈ ಕುರಿತು ತಿತಿಮತಿ ಅರಣ್ಯ ವಲಯದ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

error: Content is protected !!