ಎಲೈಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ-2026: ಹಸಿರು ಉಳಿಸುವ ಸಂದೇಶದೊಂದಿಗೆ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮ

ಹಾಸನ, ಜೂನ್ 5,(www.kannadapost.com): ಹಾಸನದ ಎಲೈಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ-2026 ಅನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿತ ಮತ್ತು ಹಸಿರು ಜೀವನಶೈಲಿಯ ಮಹತ್ವ ಕುರಿತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ಜಾವಗಲ್ ಪ್ರಸನ್ನ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಹಸಿರೇ ಉಸಿರು. ಹಸಿರಿದ್ದರೆ ಮಾತ್ರ ಮಾನವ ಬದುಕಲು ಸಾಧ್ಯ. ಪರಿಸರ ನಾಶವು ಮಾನವ ದುರಾಸೆ ಮತ್ತು ನಿಯಂತ್ರಣವಿಲ್ಲದ ಅಭಿವೃದ್ಧಿಯ ಪರಿಣಾಮವಾಗಿದೆ. ಮಿತಿಮೀರಿದ ಪ್ಲಾಸ್ಟಿಕ್ ಬಳಕೆ ಮತ್ತು ವಿಷಕಾರಿ ಅನಿಲಗಳಿಂದ ಪರಿಸರಕ್ಕೆ ದೊಡ್ಡ ಹಾನಿ ಉಂಟಾಗಿದೆ” ಎಂದು ಹೇಳಿದರು.

ಪರಿಸರ ಕಾಳಜಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ರೈತರ ಕೊಡುಗೆ ಮತ್ತು ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರ ಹೋರಾಟಗಾರರ ಸಾಧನೆಗಳನ್ನು ಸ್ಮರಿಸಿದರು.

ಶಾಲೆಯ ಆಡಳಿತಾಧಿಕಾರಿ ಶ್ರೀ ಕೆ.ಎಂ. ನಾಗಾರಾಜು ಮಾತನಾಡಿ, “ಪರಿಸರ ನಾಶದಿಂದ ಮುಂದಿನ ಪೀಳಿಗೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಕೃತಿ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಸರಳ ಜೀವನಶೈಲಿ ಅಳವಡಿಸಿಕೊಳ್ಳುವುದು ಅವಶ್ಯಕ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲೆ ಕ್ರಿಸ್ಟೀನಾ ಎಸ್. ವಹಿಸಿದ್ದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಹಸಿರು ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.