
ಕೆಯುಡಬ್ಲ್ಯೂಜೆ ಮಾಧ್ಯಮ ಸಂವಾದದಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪತ್ರಕರ್ತರ ಬಸ್ ಪಾಸ್, ಹೆಲ್ತ್ ಸ್ಕೀಂ, ಜಾಹಿರಾತು ನೀತಿ ಹಾಗೂ ಸ್ಥಳೀಯ ಪತ್ರಿಕೆಗಳ ಬಗ್ಗೆ ಮಾತನಾಡಿದರು.
Bengaluru,ಬೆಂಗಳೂರು,ಮೇ,22,2026(www.kannadapost.com): ಮಾಧ್ಯಮ ಸಲಹೆಗಾರರ ಹೊಣೆಗಾರಿಕೆ ಹೂವಿನ ಹಾದಿಯಲ್ಲ, ಮುಳ್ಳಿನ ಹಾಸಿಗೆ ಇದ್ದಂತೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಾಧ್ಯಮ ಸಲಹೆಗಾರ ಹುದ್ದೆ ಪ್ರತಿದಿನವೂ ಸವಾಲಿನದ್ದು. ಬೆಳಿಗ್ಗೆ ಪತ್ರಿಕೆಗಳನ್ನು ನೋಡುವವರೆಗೂ ದುಗುಡ ಇದ್ದೇ ಇರುತ್ತದೆ. ಆದರೆ ಈ ಹೊಣೆಗಾರಿಕೆ ಬಗ್ಗೆ ನನಗೆ ಎಂದಿಗೂ ಭ್ರಮ ನಿರಸನ ಆಗಿಲ್ಲ ಎಂದು ಹೇಳಿದರು.
ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ
ಇವತ್ತಿನವರೆಗೂ ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಯಾವುದೇ ಚಾನಲ್ ಅಥವಾ ಪತ್ರಿಕೆಯಲ್ಲಿ ಬಂದ ಸುದ್ದಿಯ ಬಗ್ಗೆ ಪ್ರಶ್ನಿಸಿಲ್ಲ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಅವರು ನಡೆದುಕೊಂಡಿದ್ದಾರೆ ಎಂದು ಪ್ರಭಾಕರ್ ಹೇಳಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ವಿಧಿಸಿದ್ದ ಕಠಿಣ ಎರಡು ಷರತ್ತುಗಳನ್ನು ಸಡಿಲಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಾರದೊಳಗೆ ಆದೇಶ ಹೊರಡಿಸಲಾಗುವುದು. ಇದರಿಂದ ಆರು ಸಾವಿರಕ್ಕೂ ಹೆಚ್ಚು ಪತ್ರಕರ್ತರಿಗೆ ಸೌಲಭ್ಯ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜಾಹಿರಾತು ನೀತಿ, ದರ ಪರಿಷ್ಕರಣೆ ಚರ್ಚೆಯಲ್ಲಿ
ಪತ್ರಕರ್ತರ ಸಂಘ ಮತ್ತು ಪತ್ರಕರ್ತ ಸಮುದಾಯದ ಒತ್ತಡದಿಂದಲೇ ರಾಜ್ಯದಲ್ಲಿ ಜಾಹಿರಾತು ನೀತಿ ಜಾರಿಗೆ ಬಂದಿದೆ. ವೃತ್ತಿಪರವಾಗಿ ಪತ್ರಿಕೆ ನಡೆಸುವವರಿಗೆ ನೆರವಾಗಬೇಕು ಎಂಬ ಉದ್ದೇಶ ಇದರ ಹಿಂದೆ ಇದೆ. ಜಾಹಿರಾತು ದರ ಪರಿಷ್ಕರಣೆಯೂ ಚರ್ಚೆಯಲ್ಲಿದೆ ಎಂದು ಹೇಳಿದರು.
ಸ್ಥಳೀಯ ಹಾಗೂ ಸಣ್ಣ ಪತ್ರಿಕೆಗಳಿಗೆ ಜಾಹಿರಾತಿನಲ್ಲಿ ತೊಂದರೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ನಿಲುವು, ನನ್ನ ನಿಲುವೂ ಅದೇ ಎಂದು ಸ್ಪಷ್ಟಪಡಿಸಿದರು.
ಸನ್ಮಾನವನ್ನು ಮೂವರಿಗೆ ಅರ್ಪಿಸಿದ ಕೆವಿಪಿ
ತಮಗೆ ಸಿಗುವ ಸಾರ್ವಜನಿಕ ಸನ್ಮಾನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಲಾರದ ಪತ್ರಕರ್ತರು ಹಾಗೂ ರಾಜ್ಯದ ಪತ್ರಕರ್ತ ಸಮುದಾಯಕ್ಕೆ ಅರ್ಪಿಸುವುದಾಗಿ ಕೆ.ವಿ.ಪ್ರಭಾಕರ್ ಹೇಳಿದರು.
KUWJ ಶ್ಲಾಘನೆ
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪ್ರಭಾಕರ್ ಅವರು ಸರ್ಕಾರ ಮತ್ತು ಪತ್ರಕರ್ತರ ಸಂಘಟನೆ ನಡುವೆ ಸೇತುವೆಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ಜಿ.ಸಿ.ಲೋಕೇಶ, ಸೋಮಶೇಖರ್ ಕೆರಗೋಡು, ವಾಸುದೇವ ಹೊಳ್ಳ, ಎನ್.ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









