ಗಂಗಾವತಿ ನ್ಯಾಯಾಲಯ ಆವರಣದಲ್ಲಿ ಯುವ ವಕೀಲ ಕನಕೇಶ ಮುರುಡಿ (26) ಹೃದಯ ಸ್ತಂಭನದಿಂದ ನಿಧನರಾದರು. ಆರು ತಿಂಗಳ ಹಿಂದೆಯಷ್ಟೇ ವಕೀಲ ವೃತ್ತಿ ಆರಂಭಿಸಿದ್ದರು.
Gangavathi,ಗಂಗಾವತಿ,ಮೇ,21,2026(www.kannadapost.com): ಸಾಕಷ್ಟು ಸಂಕಷ್ಟಗಳ ನಡುವೆಯೂ ಉತ್ತಮ ಸಾಧನೆ ಮಾಡಿ ವಕೀಲರಾಗಿದ್ದ ಕನಕಗಿರಿ ತಾಲ್ಲೂಕಿನ ಚಿಕ್ಕ ಮಾದಿನಾಳ ಗ್ರಾಮದ ಯುವಕ ಕನಕೇಶ ಮುರುಡಿ (26) ಹೃದಯ ಸ್ತಂಭನದಿಂದಾಗಿ ಗಂಗಾವತಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಿಧನರಾದರು.
ತಾಲ್ಲೂಕು ನ್ಯಾಯಾಲಯದ ವಕೀಲರ ಸಂಘದ ಕೊಠಡಿಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರ ಬೀಳ್ಕೊಡುಗೆ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಲವಲವಿಕೆಯಿಂದ ಓಡಾಡಿದ್ದ ಕನಕೇಶ, ಊಟ ಮುಗಿಸಿ ಕ್ಯಾಂಟೀನ್ನಲ್ಲಿ ಇದ್ದಾಗ ಏಕಾಏಕಿ ಕುಸಿದು ಬಿದ್ದರು.
ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣ ಹೋಗಿತ್ತು
ಕನಕೇಶ ಅವರು ಕುಸಿದು ಬಿದ್ದ ತಕ್ಷಣ ಸಹದ್ಯೋಗಿಗಳು ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನ್ಯಾಯಾಲಯದ ವಕೀಲರ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಯಿತು.
ನ್ಯಾಯಾಧೀಶರು ಸಹ ಮೃತ ಯುವ ವಕೀಲನ ಅಂತಿಮ ದರ್ಶನ ಪಡೆದರು.
ಆರು ತಿಂಗಳ ಹಿಂದೆಯಷ್ಟೇ ವಕೀಲ ವೃತ್ತಿ ಆರಂಭ
ಗಂಗಾವತಿ ಅಪ್ಪಾನಿ ಎನ್.ಆರ್ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದ್ದ ಕನಕೇಶ ಮುರುಡಿ, ಆರು ತಿಂಗಳ ಹಿಂದೆಯಷ್ಟೇ ವಕೀಲ ವೃತ್ತಿ ಆರಂಭಿಸಿದ್ದರು.
ಸಂಕಷ್ಟಗಳ ನಡುವೆಯೂ ಶಿಕ್ಷಣ ಪಡೆದು ವಕೀಲನಾಗಿದ್ದ ಯುವಕನ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಆಘಾತ ತಂದಿದೆ.
ಮೃತರಿಗೆ ತಾಯಿ, ತಮ್ಮ ಹಾಗೂ ಸಹೋದರಿ ಇದ್ದಾರೆ.










