Hassan|ಹಾಸನ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ 14 ವರ್ಷದ ಬಾಲಕನೋರ್ವ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಜಕ್ಕವಳ್ಳಿ ಗ್ರಾಮದ ಬಳಿ ಹರಿಯುವ ಹೇಮಾವತಿ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಜಬಿವುಲ್ಲಾ ಹಾಗೂ ಗೌಸಿಯಾಭಾನು ದಂಪತಿಯ ಪುತ್ರ ಜೀಯಾವುಲ್ಲಾ (14) ಸಾವನ್ನಪ್ಪಿದ ದುರ್ದೈವಿ.
ಘಟನೆಯ ವಿವರ
ಬೇಸಿಗೆ ರಜೆಯ ಮಜಾ ಸವಿಯಲು ಈ ಕುಟುಂಬ ಪ್ರವಾಸ ಕೈಗೊಂಡಿತ್ತು. ಮೊದಲು ನುಗ್ಗೇಹಳ್ಳಿಗೆ ತೆರಳಿದ್ದ ಕುಟುಂಬ, ಅಲ್ಲಿಂದ ಜಕ್ಕವಳ್ಳಿಗೆ ಬಂದಿತ್ತು. ಜಕ್ಕವಳ್ಳಿಯ ಹೇಮಾವತಿ ನದಿ ದಡದಲ್ಲಿ ವಿಹರಿಸುತ್ತಿದ್ದ ಕುಟುಂಬದ ಎಂಟು ಮಂದಿ ಆಟವಾಡಲು ನೀರಿಗೆ ಇಳಿದಿದ್ದಾರೆ. ಎಲ್ಲರೂ ನೀರಿನಲ್ಲಿ ಖುಷಿಯಿಂದ ಆಟವಾಡುತ್ತಿದ್ದ ವೇಳೆ, ಆಳದ ಅರಿವಿಲ್ಲದೆ ಬಾಲಕ ಜೀಯಾವುಲ್ಲಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮುಂದುವರಿದ ಶೋಧಕಾರ್ಯ
ಕಣ್ಣೆದುರೇ ಮಗ ನೀರುಪಾಲಾಗಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ನದಿಯ ಬಳಿ ದೌಡಾಯಿಸಿದ್ದು, ಬಾಲಕನ ಮೃತದೇಹಕ್ಕಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










