- Hassan ಹಾಸನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಹಾಡಿ ಹೊಗಳಿದರು. ವಿಜಯ್ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದರು.
Hassan|ಹಾಸನ, ಮೇ 12: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನಾಯಕತ್ವವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನದಲ್ಲಿ ಮಾತನಾಡಿದ ಅವರು, ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ, ಕಾಂಗ್ರೆಸ್ನನ್ನೂ ಹಿಂದೆ ಹಾಕಿ ವಿಜಯ್ ಅವರು ದೊಡ್ಡ ಮಟ್ಟದಲ್ಲಿ ಜನಮನ್ನಣೆ ಗಳಿಸಿದ್ದಾರೆ ಎಂದು ದೇವೇಗೌಡರು ಹೇಳಿದರು.
“ಕೆ. ಕಾಮರಾಜ್ ಅವರಿಂದ ಹಿಡಿದು ಎಂ.ಜಿಆರ್, ಕರುಣಾನಿಧಿ, ಜಯಲಲಿತಾ ಇಂತಹ ದಿಗ್ಗಜ ನಾಯಕರ ನಂತರ ವಿಜಯ್ ಅವರು ಬಹಳ ಮುಂದೆ ಬಂದಿದ್ದಾರೆ. ಅದಕ್ಕಾಗಿಯೇ ಜನರು ಅವರಿಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಹೇಳಿದರು.
ವಿಜಯ್ ಎಲ್ಲೇ ಹೋದರೂ ಲಕ್ಷಾಂತರ ಜನ ಸೇರುತ್ತಾರೆ. “ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಆ ಎತ್ತರಕ್ಕೆ ಬೆಳೆದಿರುವುದು ಗಮನಾರ್ಹ. ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಬಗ್ಗೆ ನನಗೆ ಗೌರವ ಇದೆ,” ಎಂದು ಹೇಳಿದರು.
ತಮಿಳುನಾಡು ಮತ್ತು ಕರ್ನಾಟಕ ನಡುವೆ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ಭವಿಷ್ಯದಲ್ಲಿ ಕುಳಿತು ಮಾತನಾಡುವ ಸಂದರ್ಭ ಬರಬಹುದು ಎಂದರು.
ಇದೇ ವೇಳೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಡಿಎಂಕೆ ತೊರೆದು ಟಿವಿಕೆಗೆ ಬೆಂಬಲ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, “ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸ್ಟಾಲಿನ್ ಹಾಗೂ ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಅದು ಅವರ ವೈಯಕ್ತಿಕ ವಿಚಾರ. ಕರುಣಾನಿಧಿ ಇದ್ದಾಗ ಎಷ್ಟು ಸೀಟ್ ಕೊಡುತ್ತಿದ್ದರು, ಸ್ಟಾಲಿನ್ ಏನು ಮಾಡಿದರು ಎಂಬುದನ್ನು ಈಗ ಚರ್ಚೆ ಮಾಡಿ ಪ್ರಯೋಜನ ಇಲ್ಲ,” ಎಂದು ಹೇಳಿದರು.










