Hassan: ಓವರ್‌ಟೇಕ್ ಮಾಡಲು ಹೋದ ಕಾರು ಬೈಕ್‌ಗೆ ಡಿಕ್ಕಿ; ಅಪ್ಪ-ಮಗನ ದಾರುಣ ಸಾವು

Hassan|ಹಾಸನ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮತ್ತು 6 ವರ್ಷದ ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ನಗರದ ಬಿಟ್ಟಗೌಡನಹಳ್ಳಿಯ ದೇವೇಗೌಡ ನಗರದ ಬಳಿ ನಡೆದಿದೆ. ಘಟನೆಯಲ್ಲಿ ಪತ್ನಿ ಹಾಗೂ ಮತ್ತೋರ್ವ ಮಗನಿಗೆ ಗಂಭೀರ ಗಾಯಗಳಾಗಿವೆ.

​ಮೃತರನ್ನು ಜಯಣ್ಣ (38) ಹಾಗೂ ಅವರ ಪುತ್ರ ಮಿಥುನ್ ರೈ (6) ಎಂದು ಗುರುತಿಸಲಾಗಿದೆ. ಜಯಣ್ಣ ಅವರ ಪತ್ನಿ ರಜಿನಿ ಮತ್ತು ಮತ್ತೋರ್ವ ಮಗ ಮಿಲನ್ ಜೈ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಘಟನೆಯ ಹಿನ್ನೆಲೆ:

ಮೂಲತಃ ಗೊರೂರಿನವರಾದ ಜಯಣ್ಣ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ (KA-13 EE-5053) ಹಾಸನಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಗೊರೂರಿಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ಸಂಭವಿಸಿದ್ದು ಹೇಗೆ?:

ಜಯಣ್ಣ ಅವರ ಕುಟುಂಬ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಅರಕಲಗೂಡು ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಟಾಟಾ ಟಿಯಾಗೋ ಕಾರು (KA-13 P-4638) ವಾಹನವೊಂದನ್ನು ಹಿಂದಿಕ್ಕಲು (ಓವರ್‌ಟೇಕ್) ಯತ್ನಿಸಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

​ಡಿಕ್ಕಿಯ ರಭಸಕ್ಕೆ 6 ವರ್ಷದ ಬಾಲಕ ಮಿಥುನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಜಯಣ್ಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಾದ ರಜಿನಿ ಹಾಗೂ ಮಿಲನ್ ಜೈ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

​ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.