11.5 C
Munich
Home News Hassan:ಹಾಸನ:ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಹಾಸನದ ಜನಪ್ರಿಯ ಆಸ್ಪತ್ರೆ ಸಾಧನೆ | ಮೆದುಳು ಹೊರಬಂದಿದ್ದ ಯುವಕನಿಗೆ ಪುನರ್ಜನ್ಮ

Hassan:ಹಾಸನ:ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಹಾಸನದ ಜನಪ್ರಿಯ ಆಸ್ಪತ್ರೆ ಸಾಧನೆ | ಮೆದುಳು ಹೊರಬಂದಿದ್ದ ಯುವಕನಿಗೆ ಪುನರ್ಜನ್ಮ

ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯ ಬಳಿಕ ಗುಣಮುಖನಾದ ಅಪಘಾತ ಪೀಡಿತ ಯುವಕ ಮತ್ತು ವೈದ್ಯರ ತಂಡ.
ತಲೆ ಬುರುಡೆ ಪುಡಿಪುಡಿಯಾಗಿ ಮೆದುಳು ಹೊರಬಂದಿದ್ದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರು.

ಕೊಣನೂರು ಸಮೀಪ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ.

ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಹಾಸನದ ಜನಪ್ರಿಯ ಆಸ್ಪತ್ರೆಯ ಮತ್ತೊಂದು ಸಾಧನೆ

Hassan,ಹಾಸನ,ಮೇ,11,2026(www.kannadapost.com): ಕೊಣನೂರು ಸಮೀಪ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬದುಕುವ ಸಾಧ್ಯತೆ ಕೇವಲ ಒಂದು ಶೇಕಡ ಮಾತ್ರ ಇದೆ ಎಂದು ಹೇಳಲಾಗಿದ್ದ ಯುವಕನಿಗೆ ಹಾಸನದ ಜನಪ್ರಿಯ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಮೂಲಗಳ ಪ್ರಕಾರ, ಬೈಕ್ ಅಪಘಾತದಲ್ಲಿ ಯುವಕನ ತಲೆ ಬುರುಡೆ ಪುಡಿಪುಡಿಯಾಗಿದ್ದು, ಮೆದುಳು ಹೊರಗೆ ಬಂದಿತ್ತು. ಅಲ್ಲದೆ ಕೈ ಮತ್ತು ಕಾಲಿನ ಮೂಳೆಗಳು ಮುರಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಯುವಕ ಬದುಕುವುದು ಕಷ್ಟ ಎಂದು ಹೇಳಲಾಗಿದ್ದರೂ, ಜನಪ್ರಿಯ ಆಸ್ಪತ್ರೆಯ ವೈದ್ಯರು ತುರ್ತು ಚಿಕಿತ್ಸೆ ಹಾಗೂ ಹಲವು ಹಂತದ ಶಸ್ತ್ರಚಿಕಿತ್ಸೆಗಳ ಮೂಲಕ ಯುವಕನಿಗೆ ಪುನರ್ಜನ್ಮ ನೀಡಿದ್ದಾರೆ.

“ವೈದ್ಯರು ನನ್ನ ಮಗನಿಗೆ ಪುನರ್ಜನ್ಮ ನೀಡಿದ್ದಾರೆ”

ಗಾಯಾಳುವಿನ ತಂದೆ ಮಂಜುನಾಥ್ ಮಾತನಾಡಿ, “ದೇವರ ಆಶೀರ್ವಾದದಿಂದ ನಾವು ಮಗನಿಗೆ ಜನ್ಮ ನೀಡಿದ್ದೇವೆ. ಈಗ ವೈದ್ಯರು ಅವನಿಗೆ ಪುನರ್ಜನ್ಮ ನೀಡಿದ್ದಾರೆ. ಆರಂಭದಲ್ಲಿ ಮಗ ಉಳಿಯುವುದು ಕೇವಲ ಒಂದು ಶೇಕಡ ಮಾತ್ರ ಎಂದು ವೈದ್ಯರು ತಿಳಿಸಿದ್ದರು. ಆದರೂ ವೈದ್ಯರನ್ನು ಕೇಳಿಕೊಂಡು ಚಿಕಿತ್ಸೆ ಮುಂದುವರಿಸಲು ವಿನಂತಿಸಿದ್ದೇವೆ. ವೈದ್ಯರು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಇಂದು ಮಗ ನಮ್ಮೊಂದಿಗೆ ಮಾತನಾಡುವ ಸ್ಥಿತಿಗೆ ಬಂದಿದ್ದಾನೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಹೃದಯ ಬಡಿತ ನಿಂತಿದ್ದ ಸ್ಥಿತಿಯಲ್ಲಿ ದಾಖಲು

ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೀಲು ಮತ್ತು ಮೂಳೆ ತಜ್ಞರಾದ ಡಾ. ವಿ.ಕೆ. ಅಬ್ದುಲ್ ಬಶೀರ್ ಮಾತನಾಡಿ, “ಅಪಘಾತದ ವೇಳೆ ಯುವಕನ ತಲೆ ಬುರುಡೆ ಸಂಪೂರ್ಣ ಜಜ್ಜಿಹೋಗಿ ಮೆದುಳು ಹೊರಗೆ ಬಂದಿತ್ತು. ಕಲ್ಲು ಮತ್ತು ಮಣ್ಣು ಮೆದುಳಿನ ಒಳಭಾಗ ಸೇರಿಕೊಂಡಿತ್ತು. ಆಸ್ಪತ್ರೆಗೆ ದಾಖಲಾದಾಗ ಹೃದಯ ಬಡಿತ ಹಾಗೂ ನಾಡಿ ಮಿಡಿತ ಇರಲಿಲ್ಲ” ಎಂದು ವಿವರಿಸಿದರು.

“ತಕ್ಷಣ ಡಿ-ಫಿಬ್ರಿಲೇಟರ್ ಯಂತ್ರದ ಮೂಲಕ ಹೃದಯ ಬಡಿತವನ್ನು ಮರುಸ್ಥಾಪಿಸಿ, 8ರಿಂದ 10 ಬಾಟಲ್ ರಕ್ತವನ್ನು ನೀಡಲಾಯಿತು. ನಂತರ ಪೋಷಕರ ಒಪ್ಪಿಗೆ ಪಡೆದು ಹಲವು ಹಂತದ ಶಸ್ತ್ರಚಿಕಿತ್ಸೆ ನಡೆಸಲಾಯಿತು” ಎಂದು ಹೇಳಿದರು.

ಮೂರು ವಾರ ಕೃತಕ ಉಸಿರಾಟದ ಯಂತ್ರದಲ್ಲಿ ಚಿಕಿತ್ಸೆ

ಯುವಕ ಸುಮಾರು ಮೂರು ವಾರಗಳ ಕಾಲ ಕೃತಕ ಉಸಿರಾಟದ ಯಂತ್ರದ ಸಹಾಯದಲ್ಲಿ ಚಿಕಿತ್ಸೆ ಪಡೆದಿದ್ದು, ಐದುರಿಂದ ಆರು ಶಸ್ತ್ರಚಿಕಿತ್ಸೆಗಳ ಬಳಿಕ ಚೇತರಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ತಿಂಗಳ ಬಳಿಕ ಅವರು ಮಾತನಾಡಲು ಹಾಗೂ ಸ್ವತಃ ನಡೆಯಲು ಆರಂಭಿಸಿದ್ದಾರೆ.

ವೈದ್ಯರ ತಂಡದ ಪರಿಶ್ರಮ

ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಡಾ. ವಿ.ಕೆ. ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ ಹಿರಿಯ ನರರೋಗ ಶಸ್ತ್ರಚಿಕಿತ್ಸಕರಾದ ಡಾ. ಶ್ರೀಚೇತನ್ಯ, ಡಾ. ಹರ್ಷ ಸುರೇಶ್, ಅರವಳಿಕೆ ತಜ್ಞರಾದ ಡಾ. ಸುಹಾಸ್, ಐಸಿಯು ತಜ್ಞರಾದ ಡಾ. ಮನೋಜ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ನೆರವೇರಿಸಿದ್ದಾರೆ.

error: Content is protected !!