11.5 C
Munich
Home News Hassan:ಹಾಸನ:ವಿಜಯ್ ಗ್ಯಾರಂಟಿಗಳಿಗೆ 7 ಲಕ್ಷ ಕೋಟಿ ಎಲ್ಲಿಂದ ತರ್ತಾರೆ?

Hassan:ಹಾಸನ:ವಿಜಯ್ ಗ್ಯಾರಂಟಿಗಳಿಗೆ 7 ಲಕ್ಷ ಕೋಟಿ ಎಲ್ಲಿಂದ ತರ್ತಾರೆ?

ಸರ್ಕಾರಗಳನ್ನು ಉರುಳಿಸಿದ ಇತಿಹಾಸ ಕಾಂಗ್ರೆಸ್‌ಗಿದೆ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ದೃಶ್ಯ.
ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ.

Hassan ಹಾಸನದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ. ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಗೆಲುವು, ಉಚಿತ ಗ್ಯಾರಂಟಿ ಸವಾಲು ಹಾಗೂ ಕಾಂಗ್ರೆಸ್‌ನ ದ್ವಿಮುಖ ನೀತಿಯ ಬಗ್ಗೆ ತೀವ್ರ ವಾಗ್ದಾಳಿ.

Hassan,ಹಾಸನ,ಮೇ,08,2026(www.kannadapost.com): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಭರ್ಜರಿ ಗೆಲುವು, ಉಚಿತ ಗ್ಯಾರಂಟಿಗಳ ಸವಾಲು ಹಾಗೂ ಕಾಂಗ್ರೆಸ್ ಪಕ್ಷದ ಅವಕಾಶವಾದಿ ರಾಜಕಾರಣದ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯದ ಹಲವು ವಿದ್ಯಮಾನಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಹಂಚಿಕೊಂಡರು.

*ವಿಜಯ್ ಗೆಲುವಿನ ನಿರೀಕ್ಷೆ ಇತ್ತು, ಆದರೆ ಗ್ಯಾರಂಟಿ ಕಥೆ ಏನು?*

“ಕಳೆದ 50 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತವನ್ನು ನೋಡಿದ್ದ ತಮಿಳುನಾಡು ಜನತೆ, ಒಂದು ಹೊಸ ವ್ಯವಸ್ಥೆ ತರಲು ನಿರ್ಧರಿಸುತ್ತಾರೆ ಎಂಬ ನಿರೀಕ್ಷೆ ನನಗಿತ್ತು. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾದ ಪ್ರಭಾವ ಮೊದಲಿನಿಂದಲೂ ಇದೆ. ಹೀಗಾಗಿ ಹೊಸ ಮುಖಕ್ಕೆ ಅವಕಾಶ ನೀಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಹೇಳುತ್ತಿದ್ದವು. ಆದರೆ, ವಿಜಯ್ ಅವರ ಈ ಮಟ್ಟದ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದೊಂದು ಅಚ್ಚರಿಯ ಫಲಿತಾಂಶ,” ಎಂದು ಕುಮಾರಸ್ವಾಮಿ ಬಣ್ಣಿಸಿದರು.

ಆದರೆ, ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ವಿಜಯ್ ಅವರಿಗೆ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಯಾರು ಪ್ರಭಾವ ಬೀರಿದರೋ ಗೊತ್ತಿಲ್ಲ. ಆ ರಾಜ್ಯದ ಒಟ್ಟು ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ರೂ. ಇದೆ. ಆದರೆ, ಅವರು ಘೋಷಿಸಿರುವ ಉಚಿತ ಗ್ಯಾರಂಟಿಗಳನ್ನು ಈಡೇರಿಸಲು 6 ರಿಂದ 7 ಲಕ್ಷ ಕೋಟಿ ರೂ. ಬೇಕು. ಅದ್ಯಾವ ರೀತಿ ಹಣ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ದೇವರೇ ಅವರನ್ನು ಕಾಪಾಡಬೇಕು,” ಎಂದು ವ್ಯಂಗ್ಯವಾಡಿದರು.

*ಡಿಎಂಕೆ-ಎಐಎಡಿಎಂಕೆ ಮೈತ್ರಿ ಕೇವಲ ಊಹಾಪೋಹ*
“ತಮಿಳುನಾಡು ರಾಜ್ಯಪಾಲರು ಕಾನೂನು ಪಂಡಿತರಿಂದ ಮಾಹಿತಿ ಪಡೆದು ಸ್ಪಷ್ಟ ಬಹುಮತದ ಸಂಖ್ಯೆಯನ್ನು ಗಮನಕ್ಕೆ ತನ್ನಿ ಎಂದಿದ್ದಾರೆ. ಆದರೆ, ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುತ್ತವೆ ಎಂಬುದು ನನ್ನ ರಾಜಕೀಯ ಅನುಭವದಲ್ಲಿ ಊಹಾಪೋಹದ ಸುದ್ದಿ. ಇಂತಹ ಸುದ್ದಿ ಬಂದಿರುವುದೇ ತಪ್ಪು,” ಎಂದು ಸ್ಪಷ್ಟಪಡಿಸಿದರು.

*ಸರ್ಕಾರಗಳನ್ನು ಅಸ್ಥಿರಗೊಳಿಸುವುದೇ ಕಾಂಗ್ರೆಸ್ ಚಾಳಿ*

ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, “ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ನಾನು ಟೀಕೆ ಮಾಡಬೇಕಾ? ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ ರೀತಿ ಸರ್ಕಾರಗಳನ್ನು ಅವರು ಅಸ್ಥಿರಗೊಳಿಸಿದ್ದಾರೆ ಎಂಬುದು ಇತಿಹಾಸ. ಕೇಂದ್ರದಲ್ಲಿದ್ದ ಚರಣ್‌ ಸಿಂಗ್ ಅವರಿಂದ ಪ್ರಾರಂಭವಾಗಿ ವಿ.ಪಿ. ಸಿಂಗ್, ಚಂದ್ರಶೇಖರ್ ಹಾಗೂ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನು ಕೊಟ್ಟು ಸರ್ಕಾರ ತೆಗೆದರು? 20 ವರ್ಷಗಳ ಕಾಲ ಡಿಎಂಕೆ ಜೊತೆಗಿದ್ದ ಸಂಬಂಧ ಕಡಿದುಕೊಂಡು ಈಗ ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಕಾಲವೇ ಅದಕ್ಕೆ ಉತ್ತರ ಕೊಡಲಿದೆ,” ಎಂದು ಗುಡುಗಿದರು. “ಕಾಂಗ್ರೆಸ್ ನಾಯಕರು ತಮಗೆ ಬೇಕಾದಾಗ ವ್ಯವಸ್ಥೆ ಚೆನ್ನಾಗಿದೆ ಎನ್ನುತ್ತಾರೆ, ಸೋತಾಗ ಇಡಿ, ಐಟಿ ದುರುಪಯೋಗ ಎನ್ನುತ್ತಾರೆ,” ಎಂದು ಟೀಕಿಸಿದರು.

*ಬಿಎಸ್‌ವೈ ಕಾರ್ಯಕ್ರಮಕ್ಕೆ ಗೈರು*

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಾಧನೆಯ ಅಭಿನಂದನಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಯಡಿಯೂರಪ್ಪ ಅವರ ಸಾಧನೆ ಹಾಗೂ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ನನಗೆ ಮೊದಲೇ ನಿಗದಿಯಾದ ಬೇರೆ ಕಾರ್ಯಕ್ರಮಗಳಿರುವುದರಿಂದ ನಾನು ಇದರಲ್ಲಿ ಭಾಗವಹಿಸುತ್ತಿಲ್ಲ,” ಎಂದು ಸ್ಪಷ್ಟಪಡಿಸಿದರು.

*ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಏಕಾಂಗಿ ಅಧಿಕಾರ ಕಷ್ಟ*

“ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬದಲಾವಣೆ ಆಗಬಹುದು ಎಂಬುದು ಜನಸಾಮಾನ್ಯರ ಚರ್ಚೆಯಾಗಿದೆ. ಆದರೆ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಸದ್ಯಕ್ಕಿಲ್ಲ. ಇಲ್ಲಿಯ ರಾಜಕಾರಣಕ್ಕೂ, ಬೇರೆ ರಾಜ್ಯಗಳ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ,” ಎಂದು ವಾಸ್ತವವನ್ನು ಬಿಚ್ಚಿಟ್ಟರು.

*ಬಾಲಿಷ ಹೇಳಿಕೆ ಎಂದ ಎಚ್‌ಡಿಕೆ*

ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಚುನಾವಣಾ ಆಯೋಗದಿಂದ ಸ್ಪಷ್ಟ ಬಹುಮತದ ಘೋಷಣೆಯಾದ ಮೇಲೂ ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡುವುದಿಲ್ಲ ಎನ್ನುವುದು ಬಾಲಿಷವಾದ ಹೇಳಿಕೆ. ನಮ್ಮ ಸಂವಿಧಾನದಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ,” ಎಂದರು. ಶೃಂಗೇರಿ ಕ್ಷೇತ್ರದ ಮರುಎಣಿಕೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, “ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಈಗ ‘ವೋಟ್ ಚೋರಿ’ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡೋಣ,” ಎಂದು ತಿಳಿಸಿದರು.

error: Content is protected !!