- ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಇಂದು ಹಾಸನಕ್ಕೆ ಭೇಟಿ ನೀಡಲಿದ್ದು, ಬೂವನಹಳ್ಳಿ ಶ್ರೀ ದೇವಿರಮ್ಮ ದೇವಿಯ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಮೇ 8 ರಿಂದ 10 ರವರೆಗೆ ನಡೆಯುವ ಈ ಅದ್ಧೂರಿ ಜಾತ್ರೆಯ ಸಂಪೂರ್ಣ ವಿವರ ಇಲ್ಲಿದೆ.
Hassan|ಹಾಸನ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಇಂದು) ಹಾಸನ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಆಗಮಿಸಲಿರುವ ಅವರು, ತಾಲ್ಲೂಕಿನ ಬೂವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀ ದೇವಿರಮ್ಮ ದೇವಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಜಾತ್ರಾ ಮಹೋತ್ಸವದ ವಿವರ:
ಮೇ 8 ರಿಂದ 10 ರವರೆಗೆ ಶ್ರೀ ದೇವಿರಮ್ಮ ದೇವಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಇದಕ್ಕಾಗಿ ಇಡೀ ಬೂವನಹಳ್ಳಿ ಗ್ರಾಮವು ವಧುವಿನಂತೆ ಸಿಂಗಾರಗೊಂಡಿದೆ. ಹಬ್ಬದ ಮೊದಲ ದಿನವಾದ ಇಂದು ಬೆಳಿಗ್ಗೆ 9 ಗಂಟೆಗೆ ರಥಕ್ಕೆ ಕಳಸ ಪ್ರತಿಷ್ಠಾಪನೆ ನೆರವೇರಲಿದೆ. ದೇವಿಗೆ ಸಹಸ್ರನಾಮ ಪೂಜೆ ಹಾಗೂ ಸಂಜೆ 4 ಗಂಟೆಗೆ ದೇವಿಯ ರಥಾರೋಹಣ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7 ರಿಂದ ವಿವಿಧ ಧಾರ್ಮಿಕ ಸೇವೆಗಳು ಹಾಗೂ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಮೇ 9 ರಂದು ರಥೋತ್ಸವ:
ಶನಿವಾರ ಬೆಳಿಗ್ಗೆ 3 ಗಂಟೆಗೆ ಭಕ್ತರಿಂದ ಅತ್ಯಂತ ಭಕ್ತಿಯ ‘ಬಾಯಿ ಬೀಗ’ ಸೇವೆ ಆರಂಭವಾಗಲಿದೆ. ಬೆಳಿಗ್ಗೆ 8.30ಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ದೇವಿಯ ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 7.30 ರಿಂದ ಸಾರ್ವಜನಿಕರಿಗಾಗಿ ಆರ್ಕೆಸ್ಟ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗಣ್ಯರ ಉಪಸ್ಥಿತಿ:
ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪಾಲ್ಗೊಳ್ಳಲಿದ್ದಾರೆ. ಮಾಜಿ ಶಾಸಕರಾದ ಪ್ರೀತಂ ಜೆ. ಗೌಡ, ಬಿ.ವಿ. ಕರೀಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಎಸ್ಪಿ ಶುಭಾನ್ವಿತಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ ಎಂದು ಸ್ವಾಗತ ಸಮಿತಿ ತಿಳಿಸಿದೆ.










