- ಹಾಸನದ ತಣ್ಣೀರುಹಳ್ಳ ಮಠದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಸುತ್ತೂರು ಶ್ರೀಗಳು ವಚನ ಸಾಹಿತ್ಯದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಸಂಪೂರ್ಣ ವರದಿ ಇಲ್ಲಿದೆ.
Hassan|ಹಾಸನ: 12ನೇ ಶತಮಾನದ ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಆಸ್ತಿ. ಸಮಾನತೆ, ಕಾಯಕ ತತ್ವ ಮತ್ತು ಸಾಮಾಜಿಕ ಪರಿವರ್ತನೆಯನ್ನು ಪ್ರತಿಪಾದಿಸುವ ಈ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಠಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸುತ್ತೂರು ಮಠದ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ನಗರದ ತಣ್ಣೀರುಹಳ್ಳ ಮಠದಲ್ಲಿ ಆಯೋಜಿಸಲಾಗಿದ್ದ ಲಿಂ. ಪೂಜ್ಯ ಡಾ. ಶ್ರೀ ಶಿವಕುಮಾರಸ್ವಾಮೀಜಿಗಳ ಜನ್ಮದಿನ, ಪೂಜ್ಯ ಶ್ರೀ ಶಿವಲಿಂಗಸ್ವಾಮೀಜಿಗಳ 92ನೇ ಜಯಂತೋತ್ಸವ, ದಾಸೋಹ ಭವನ ಉದ್ಘಾಟನೆ ಹಾಗೂ ಪೂಜ್ಯ ಶ್ರೀ ವಿಜಯಕುಮಾರ ಸ್ವಾಮೀಜಿಗಳ 56ನೇ ಪಟ್ಟಾಧಿಕಾರ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ವಚನ ಸಾಹಿತ್ಯದ ಮಹತ್ವ
ವಚನ ಸಾಹಿತ್ಯವು ಜನಸಾಮಾನ್ಯರಿಗೆ ತಲುಪುವ ಸರಳ ಭಾಷೆಯಲ್ಲಿದೆ. ಅಂತರಂಗದ ಶುದ್ಧಿ ಮತ್ತು ಸಮಾಜದ ಸುಧಾರಣೆಯೇ ಇದರ ಮೂಲ ಉದ್ದೇಶ. ಮಠಗಳು ಕೇವಲ ತ್ರಿವಿಧ ದಾಸೋಹಕ್ಕೆ ಸೀಮಿತವಾಗದೆ, ಈ ದಾರ್ಶನಿಕ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಬೇಕು. ತಣ್ಣೀರುಹಳ್ಳ ಮಠವು ಅತ್ಯಲ್ಪ ಅವಧಿಯಲ್ಲಿ ಶ್ರೀ ವಿಜಯಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಅದ್ಭುತವಾಗಿ ಬೆಳೆದಿದೆ ಎಂದು ಸುತ್ತೂರು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಕಾರಯುತ ಶಿಕ್ಷಣದ ಅಗತ್ಯ
ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, “ಮಠಗಳು ಅಕ್ಷರ, ವಸ್ತ್ರ ಮತ್ತು ವಸತಿ ನೀಡುವ ದಾಸೋಹ ಕೇಂದ್ರಗಳಾದಾಗ ಮಾತ್ರ ಗೌರವ ಸಿಗುತ್ತದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದರೆ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಸಿದ್ದಗಂಗಾ ಶ್ರೀಗಳ ಶಿಕ್ಷಣ ಕ್ರಾಂತಿಯ ಹಾದಿಯಲ್ಲೇ ತಣ್ಣೀರುಹಳ್ಳ ಮಠವು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ” ಎಂದರು.
ಆರೋಗ್ಯ ಮತ್ತು ಅಧ್ಯಾತ್ಮ
ಪುಷ್ಪಗಿರಿ ಮಠದ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂದಿನ ಧಾವಂತದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾನೆ. ಸುಂದರ ಬದುಕಿಗೆ ಧಾರ್ಮಿಕ ಕಾರ್ಯಕ್ರಮಗಳು ಪೂರಕ. ಭಕ್ತರು ಕೇವಲ ಪ್ರಸಾದಕ್ಕೆ (ಊಟಕ್ಕೆ) ಆದ್ಯತೆ ನೀಡದೆ, ಪೂಜ್ಯರ ಜ್ಞಾನಾಮೃತವನ್ನು ಆಲಿಸಬೇಕು ಎಂದು ಕಿವಿಮಾತು ಹೇಳಿದರು.

ಮಠದ ಐತಿಹಾಸಿಕ ಸೇವೆ
ಪ್ರಾಸ್ತಾವಿಕವಾಗಿ ಮಾತನಾಡಿದ ವಿರಾಜಪೇಟೆ ಅರಮೇರಿಮಠದ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, “ತಣ್ಣೀರುಹಳ್ಳ ಮಠವು 18ನೇ ಶತಮಾನದಿಂದಲೂ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆ ನೀಡುತ್ತಾ ಬಂದಿದೆ. ಸಿದ್ದೇಶ್ವರ ಐಟಿಐ ಸ್ಥಾಪಿಸುವ ಮೂಲಕ ವೃತ್ತಿಪರ ಶಿಕ್ಷಣಕ್ಕೆ ನಾಂದಿ ಹಾಡಿದೆ. ಶ್ರೀ ವಿಜಯಕುಮಾರ ಸ್ವಾಮೀಜಿಗಳು ಕೇವಲ 56 ತಿಂಗಳಲ್ಲಿ ಮಠಕ್ಕೆ ಹೊಸ ಚೈತನ್ಯ ತುಂಬಿದ್ದಾರೆ” ಎಂದು ಶ್ಲಾಘಿಸಿದರು.

: ಭಕ್ತರ ಸಹಕಾರವೇ ಮಠದ ಶಕ್ತಿ
”ಕಳೆದ 56 ತಿಂಗಳಲ್ಲಿ ಸಿದ್ದಗಂಗಾ ಮತ್ತು ಕನಕಪುರ ಪೂಜ್ಯರ ಮಾರ್ಗದರ್ಶನದಲ್ಲಿ ಹಳ್ಳಿ ಹಳ್ಳಿ ಸಂಚರಿಸಿ 84 ಲಕ್ಷ ರೂ. ಸಂಗ್ರಹಿಸಲಾಗಿದೆ. ದಾನಿಗಳ ನೆರವಿನಿಂದ ದಾಸೋಹ ಭವನ ನಿರ್ಮಾಣವಾಗಿದೆ. ಕಾಯಕ ಮತ್ತು ದಾಸೋಹವೇ ಈ ಮಠದ ಅಡಿಪಾಯ” ಎಂದು ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿಗಳು ತಿಳಿಸಿದರು.
ಪರಿಶ್ರಮದ ಫಲ
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಮಾತನಾಡಿ, ವಿಜಯಕುಮಾರ ಸ್ವಾಮೀಜಿಗಳು ಹಳ್ಳಿ ಹಳ್ಳಿಗೆ ತೆರಳಿ ಭಿಕ್ಷಾಟನೆ ನಡೆಸಿ ಮಠವನ್ನು ಸಮೃದ್ಧವಾಗಿ ಕಟ್ಟಿದ್ದಾರೆ. ಅವರ ಕಾರ್ಯವೈಖರಿ ಇತರರಿಗೆ ಮಾದರಿ ಎಂದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್, ಗುರುದೇವ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್ ಸೇರಿದಂತೆ ಹಲವಾರು ಗಣ್ಯರು ಹಾಗೂ ವಿವಿಧ ಮಠಗಳ ಪೂಜ್ಯರು ಉಪಸ್ಥಿತರಿದ್ದರು.










