Hassan| ಬಡ್ಡಿಸಮೇತ ತೀರಿಸದಿದ್ದರೆ ನನ್ನನ್ನು ರೇವಣ್ಣ ಅಂತ ಕರಿಬೇಡಿ: ಭಾವುಕರಾಗಿ ಕಣ್ಣೀರಿಟ್ಟ ಮಾಜಿ ಸಚಿವ

  • ಹಾಸನದ ದೊಡ್ಡಬೀಕನಹಳ್ಳಿಯಲ್ಲಿ ನಡೆದ ದೇವಾಲಯ ಉದ್ಘಾಟನೆ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭಾವುಕರಾಗಿ ಕಣ್ಣೀರಿಟ್ಟರು. ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಬಡ್ಡಿ ಸಮೇತ ತೀರಿಸುವ ಎಚ್ಚರಿಕೆ ನೀಡಿದ್ದಾರೆ.

Hassan|ಹಾಸನ: ಆಲೂರು ತಾಲ್ಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್ ಪ್ರಭಾವಿ ನಾಯಕ ಎಚ್.ಡಿ. ರೇವಣ್ಣ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

​ದೇವೇಗೌಡರಿಗೆ ಶಕ್ತಿ ನೀಡಿದ ಗ್ರಾಮವಿದು:

​ವೇದಿಕೆಯ ಮೇಲೆ ಮಾತನಾಡಿದ ರೇವಣ್ಣ, “1990ರಲ್ಲಿ ದೇವೇಗೌಡರು ರಾಜಕೀಯವಾಗಿ ಮುಗಿದುಹೋದರು ಎಂದು ಎಲ್ಲರೂ ಅಂದುಕೊಂಡಿದ್ದ ಕಾಲದಲ್ಲಿ ಅವರಿಗೆ ಮರುಜೀವ ನೀಡಿದ ಗ್ರಾಮಗಳಿವು. ಈ ರಸ್ತೆಯಲ್ಲಿ ದೇವೇಗೌಡರಿಗೆ ರಾಜಕೀಯ ಶಕ್ತಿ ಕೊಟ್ಟ ಗ್ರಾಮವೆಂದರೆ ಅದು ದೊಡ್ಡಬೀಕನಹಳ್ಳಿ. ಆ ಋಣಕ್ಕಾಗಿ ನಾನು ಎಂದಿಗೂ ಕಾನೂನು ನೋಡದೆ ಕೆಲಸ ಮಾಡಿದ್ದೇನೆ. ಕುಮಾರಣ್ಣನ ಅವಧಿಯಲ್ಲಿ ಸುಮಾರು 450 ಕೋಟಿ ರೂ. ವೆಚ್ಚದ ಕೆಲಸಗಳನ್ನು ಈ ಹೋಬಳಿಗೆ ತಂದಿದ್ದೇನೆ ಮತ್ತು ಜಿಲ್ಲೆಯಲ್ಲಿ ಸುಮಾರು 140 ದೇವಾಲಯಗಳ ನಿರ್ಮಾಣಕ್ಕೆ ಶ್ರಮಿಸಿದ್ದೇನೆ” ಎಂದು ಸ್ಮರಿಸಿದರು.

​ಪೊಲೀಸ್ ಇಲಾಖೆ ವಿರುದ್ಧ ರೇವಣ್ಣ ಕಿಡಿ:

​ಇದೇ ವೇಳೆ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಮತ್ತು ಅಧಿಕಾರಿಗಳ ವರ್ತನೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಈ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇದೆಯೇ? ಎಂದು ಕೇಳಲು ನಾಚಿಕೆಯಾಗುತ್ತಿದೆ. ಹದಿನಾರು ವರ್ಷಗಳಿಂದ ಇರುವ ರಸ್ತೆಯ ವಿಚಾರದಲ್ಲಿ ಇಡೀ ಗ್ರಾಮಸ್ಥರ ಮೇಲೆ ದೂರು ದಾಖಲಿಸಲು ಒತ್ತಡ ಹೇರಲಾಗುತ್ತಿದೆ. ಒಂದು ಮನೆಗೋಸ್ಕರ ಹದಿನೈದು ವರ್ಷದ ಹಳೆಯ ರಸ್ತೆಯನ್ನು ಬಗೆಯುವ ಕೆಲಸಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ” ಎಂದು ಕಿಡಿಕಾರಿದರು.

​”ನಾನು ನೋವಿನಿಂದ ಹೇಳುತ್ತಿದ್ದೇನೆ, ಈ ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ. ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ನನಗೆ ಗೊತ್ತಿದೆ.”

​ಕಾರ್ಯಕರ್ತರಿಗೆ ಅಭಯ: ‘ಬಡ್ಡಿ ಸಮೇತ ತೀರಿಸ್ತೀನಿ’

​ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಕಾರ್ಯಕರ್ತರಿಗೆ ಎಷ್ಟೇ ನೋವಾದರೂ ಸ್ವಲ್ಪ ದಿನ ಸಮಾಧಾನದಿಂದ ಇರಿ. ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ನನ್ನ ಗಮನದಲ್ಲಿದೆ. ಎಲ್ಲವನ್ನೂ ಬಡ್ಡಿ ಸಮೇತ ತೀರಿಸುವವರೆಗೂ ನಾನು ರಾಜಕೀಯದಲ್ಲೇ ಇರುತ್ತೇನೆ. ಒಂದು ವೇಳೆ ಬಡ್ಡಿ ಸಮೇತ ತೀರಿಸದಿದ್ದರೆ ನನ್ನನ್ನು ರೇವಣ್ಣ ಎಂದು ಕರೆಯಬೇಡಿ” ಎಂದು ಸವಾಲು ಹಾಕಿದರು.

​ಚುನಾವಣಾ ಸೋಲಿನ ಬಗ್ಗೆ ವಿಷಾದ

​ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ (ಸಕಲೇಶಪುರ ಶಾಸಕರು) ಅವರ ಸೋಲಿನ ಬಗ್ಗೆ ಮಾತನಾಡುತ್ತಾ, “ಕುಮಾರಸ್ವಾಮಿ ಅವರು ಮೋಸದಿಂದ ಸೋತಿದ್ದಾರೆ. ನಮ್ಮಲ್ಲೇ ಕೆಲವರು ಒಳಗಡೆ ಇದ್ದುಕೊಂಡು ಅವರನ್ನು ಸೋಲಿಸುವ ಕೆಲಸ ಮಾಡಿದ್ದಾರೆ. ನಾವು ಸ್ವಲ್ಪ ಜಾಗೃತರಾಗಿದ್ದರೆ ಅವರು ಇಂದು ಶಾಸಕರಾಗಿರುತ್ತಿದ್ದರು. ದೇವೇಗೌಡರ ಪರವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಇಲ್ಲಿನ ಕಾಲೇಜನ್ನು ಮುಚ್ಚಿಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.

​ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.