Bengaluru|ಬೆಂಗಳೂರು; ಮುಖ್ಯಮಂತ್ರಿ siddaramaiah ಸಿದ್ದರಾಮಯ್ಯ ಅವರು ಇಷ್ಟೊಂದು ಅಸಹಾಯಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಯಾರೋ ಮಾಟ, ಮಂತ್ರ ಮಾಡಿಸಿರಬಹುದು. ಇದರ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು. ಟಗರು ಯಾವತ್ತಿದ್ದರೂ ಟಗರೇ ಅವರು ಅಸಹಾಯಕರಾಗಲ್ಲ’ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
’ನನ್ನ ಅನುಭವದ ಪ್ರಕಾರ ನಾನು ಸಿಎಂ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದೇನೆ. ಅಗಾಧ ಶಕ್ತಿ ಹೊಂದಿರುವ ಸಿಎಂ ಇಷ್ಟೊಂದು ಅಸಹಾಯಕರಾಗಿರುವುದನ್ನು ಎಂದೂ ನೋಡಿರಲಿಲ್ಲ. ಈಗ ನೋಡಿದರೆ ಅವರ ಮೇಲೆ ಯಾರಾದರೂ ಮಾಟ-ಮಂತ್ರ ಮಾಡಿದ್ದಾರೆಯೇ ಎನಿಸುತ್ತದೆ. ಆ ಬಗ್ಗೆ ನಾನು ವಿಚಾರ ಮಾಡುತ್ತಿದ್ದು, ತನಿಖೆ ಮಾಡಿಸುತ್ತಿದ್ದೇನೆ’ ಎಂದರು.
ಸಿಎಂ ಹಾಗೂ ನಾನು ಮಾಟ ಮಂತ್ರದಲ್ಲಿ ನಂಬಿಕೆ ಇಲ್ಲದವರು. ಮನುಷ್ಯರ ಮೇಲೆ ಪರಿಣಾಮ ಆಗಬೇಕು ಎಂದರೆ ಅವರು ಆಸ್ತಿಕರಾಗಿರಬೇಕು ಎಂದೇನೂ ಇಲ್ಲ. ಹೀಗಾಗಿ ಅವರ ಮೇಲೆ ಮಾಟ, ಮಂತ್ರ ಆಗಿರಬಹುದು ಎನಿಸುತ್ತಿದೆ ಎಂದರು.










