ಮುಖ್ಯಾಂಶಗಳು:
- ಆಲೂರು ತಾಲ್ಲೂಕಿನ ಹುಲಕುಂದ ಎಸ್ಟೇಟ್ ಬಳಿ ಘಟನೆ.
- ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದ ವೇಳೆ ಬಂದೆರಗಿದ ಸಿಡಿಲು.
- ಸಿಡಿಲಿನ ರಭಸಕ್ಕೆ ಸೀಳಿ ಎರಡು ಭಾಗವಾದ ಬೃಹತ್ ಮರ.
Hassan|ಹಾಸನ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಶುರುವಾಗಿದ್ದು, ಇದರ ಬೆನ್ನಲ್ಲೇ ಆಲೂರು ತಾಲ್ಲೂಕಿನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಮೃತ ವೃದ್ಧೆಯನ್ನು ಮಾದೀಹಳ್ಳಿ ಗ್ರಾಮದ ನಿವಾಸಿ ನೀಲಮ್ಮ (70) ಎಂದು ಗುರುತಿಸಲಾಗಿದೆ.
ಆಲೂರು ತಾಲ್ಲೂಕಿನ ಹುಲಕುಂದ ಎಸ್ಟೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏಕಾಏಕಿ ಮಳೆ ಆರಂಭವಾಗುತ್ತಿದ್ದಂತೆ ನೀಲಮ್ಮ ಅವರು ಮಳೆಯಿಂದ ರಕ್ಷಣೆ ಪಡೆಯಲು ಸ್ಥಳದಲ್ಲಿದ್ದ ಮರಯೊಂದರ ಕೆಳಗೆ ಹೋಗಿ ನಿಂತಿದ್ದರು. ಈ ವೇಳೆ ಭಾರಿ ಶಬ್ದದೊಂದಿಗೆ ಬಂದೆರಗಿದ ಸಿಡಿಲು ನೇರವಾಗಿ ಮರಕ್ಕೆ ಅಪ್ಪಳಿಸಿದ್ದು, ಪರಿಣಾಮ ನೀಲಮ್ಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿಡಿಲು ಅಪ್ಪಳಿಸಿದ ರಭಸ ಎಷ್ಟಿತ್ತೆಂದರೆ, ನೀಲಮ್ಮ ಆಶ್ರಯ ಪಡೆದಿದ್ದ ಮರವು ಸಂಪೂರ್ಣವಾಗಿ ಸೀಳಿ ಎರಡು ಭಾಗವಾಗಿದೆ. ಇದು ಸಿಡಿಲಿನ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಆಲೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಮಳೆಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಹಾಗೂ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.










