Hassan:ಮಗು ಗರ್ಭದಲ್ಲಿದ್ದಾಗಲೇ ಪೋಷಕರ ಜವಾಬ್ದಾರಿ ಶುರು: Scholars International Schoolನಲ್ಲಿ ಡಾ. ಸುತ್ತೂರು ಎಸ್. ಮಾಲಿನಿ ಕಿವಿಮಾತು

ಹಾಸನದ ಸ್ಕಾಲರ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಾಂಟೇಸರಿ-3 ಮಕ್ಕಳ ಪದವಿ ಪ್ರದಾನ, ವಿಜ್ಞಾನ ವಸ್ತು ಪ್ರದರ್ಶನ ವಿಜೇತರಿಗೆ ಬಹುಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಡಗರದಿಂದ ನೆರವೇರಿತು.

Hassan|ಹಾಸನ: ಮಗು ಗರ್ಭಾವಸ್ಥೆಯಲ್ಲಿದ್ದಾಗಲೇ ಪೋಷಕರ ಜವಾಬ್ದಾರಿ ಪ್ರಾರಂಭವಾಗುತ್ತದೆ. ತಾಯಿಯ ಭಾವನೆಗಳನ್ನು ಹೊತ್ತುಕೊಂಡೇ ಮಗು ಜನಿಸುತ್ತದೆ ಎಂದು ಪ್ರೊಫೆಸರ್ ಡಾ. ಸುತ್ತೂರು ಎಸ್. ಮಾಲಿನಿ ಅವರು ಪೋಷಕರಿಗೆ ಸಲಹೆ‌ ನೀಡಿದರು.

​ನಗರದ (Scholars International School)ಸ್ಕಾಲರ್ಸ್ ಇಂಟರ್ನ್ಯಾಷನಲ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಮಾಂಟೇಸರಿ-3 (Montessori-3) ಮಕ್ಕಳ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಕ್ಕಳನ್ನು ಶಾಲೆಗೆ ಸೇರಿಸಿದ ತಕ್ಷಣ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಗುವಿಗೆ ಮನೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು. ತಾಯಿ-ತಂದೆಯ ಅಪ್ಪುಗೆ ಮಕ್ಕಳಿಗೆ ದೊರೆತಾಗ ಮಾತ್ರ ಅವರು ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಬಲರಾಗಬಲ್ಲರು” ಎಂದು ಅವರು ಅಭಿಪ್ರಾಯಪಟ್ಟರು.

ಪುಟಾಣಿಗಳ ಪದವಿ ಸಂಭ್ರಮ:

ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಾಂಟೇಸರಿ-3 ವಿದ್ಯಾರ್ಥಿಗಳು ಕಪ್ಪು ಗೌನ್ ಮತ್ತು ಕ್ಯಾಪ್ ಧರಿಸಿ ವೇದಿಕೆಯಲ್ಲಿ ಹೆಮ್ಮೆಯಿಂದ ಪದವಿಯನ್ನು ಸ್ವೀಕರಿಸಿದ್ದು ನೋಡುಗರ ಕಣ್ಮನ ಸೆಳೆಯಿತು.

ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ:

ಇದೇ ವೇಳೆ, ಶೈಕ್ಷಣಿಕವಾಗಿ ಉತ್ತಮ ಅಂಕಗಳನ್ನು ಪಡೆದ 1ನೇ ತರಗತಿಯಿಂದ ಪಿಯುಸಿ (PUC) ವರೆಗಿನ ವಿದ್ಯಾರ್ಥಿಗಳಿಗೆ ಮೆರಿಟ್ ಮತ್ತು ಡಿಸ್ಟಿಂಕ್ಷನ್ ಅವಾರ್ಡ್‌ಗಳನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

​ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಚ್.ಎನ್. ಚಂದ್ರಶೇಖರ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹದಾಯಕ ನುಡಿಗಳನ್ನಾಡಿ ಅಭಿನಂದಿಸಿದರು. ಶಾಲೆಯ ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಹಾಗೂ ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.