Hassan|ಹಾಸನ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ: ಸಂಸದರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ; ಬ್ಯಾಕ್‌ಲಾಗ್ ತೆರವು ಮತ್ತು ಹೊಟೆಲ್-ಹಾಸ್ಟೆಲ್‌ಗಳಿಗೆ ಪೂರೈಕೆಗೆ ಖಡಕ್ ಸೂಚನೆ

Hassan|ಹಾಸನ (kannadapost.com): ಜಿಲ್ಲೆಯಾದ್ಯಂತ ಗ್ಯಾಸ್ ಗ್ರಾಹಕರು ಮತ್ತು ಹೊಟೆಲ್ ಉದ್ಯಮಿಗಳು ಎದುರಿಸುತ್ತಿರುವ ಸಿಲಿಂಡರ್ ಕೊರತೆ ಹಾಗೂ ವಿತರಣಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಸನ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.

ಜಿಲ್ಲೆಯ ಎಲ್.ಪಿ.ಜಿ. ವಿತರಕರು ಮತ್ತು ಗ್ಯಾಸ್ ಏಜೆನ್ಸಿ ಮಾಲೀಕರ ಕುಂದುಕೊರತೆಗಳನ್ನು ಆಲಿಸಿದ ಸಂಸದರು, ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ತೈಲ ಕಂಪನಿಗಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಗುರುವಾರ ನಡೆದ  ಸಭೆಯಲ್ಲಿ, ಎಲ್.ಪಿ.ಜಿ. ವಿತರಕರು ಪ್ರಸ್ತುತ ಗ್ರಾಮಾಂತರ ಪ್ರದೇಶದಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡಲು ಇರುವ 45 ದಿನಗಳ ಕಾಲಮಿತಿಯನ್ನು 25 ರಿಂದ 30 ದಿನಗಳಿಗೆ ಕಡಿಮೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ, ಓ.ಟಿ.ಪಿ. ಮೂಲಕವೇ ಸಿಲಿಂಡರ್ ಡೆಲಿವರಿ ಮಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಅನಕ್ಷರಸ್ಥರು, ವಯೋವೃದ್ಧರು ಮತ್ತು ನೆಟ್ವರ್ಕ್ ಸಮಸ್ಯೆ ಇರುವ ಗುಡ್ಡಗಾಡು ಪ್ರದೇಶಗಳ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದಕ್ಕಾಗಿ ಬಾರ್ ಕೋಡ್ ಸ್ಕ್ಯಾನ್ ನಂತಹ ಪರ್ಯಾಯ ವ್ಯವಸ್ಥೆ ಮತ್ತು ಓ.ಟಿ.ಪಿ. ನಿಯಮಗಳಲ್ಲಿ ಶೇ.10ರಷ್ಟು ವಿನಾಯಿತಿ ನೀಡಲು ಕ್ರಮವಹಿಸುವಂತೆ ಕೋರಿದರು.

ಸಂಸದರ ಕಡಕ್ ಸೂಚನೆಗಳು:

ಬ್ಯಾಕ್‌ಲಾಗ್ ಸಮಸ್ಯೆ ಕುರಿತು ಬಿಪಿಸಿ ಸೇಲ್ಸ್ ಆಫೀಸರ್ ರನ್ನು ಪ್ರಶ್ನಿಸಿದ ಸಂಸದರು, ಕೇವಲ 3 ರಿಂದ 4 ದಿನಗಳೊಳಗಾಗಿ ಎಲ್ಲಾ ಬ್ಯಾಕ್‌ಲಾಗ್‌ಗಳಿಗೆ ಗ್ಯಾಸ್ ಸಿಲಿಂಡರ್ ವಿತರಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಹೊಟೆಲ್ ಮಾಲೀಕರ ಸಮಸ್ಯೆ ಆಲಿಸಿದ ಸಂಸದರು, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಶೇ.30ರಷ್ಟು ಕಡಿತ ಉಂಟಾಗಿರುವ ಬಗ್ಗೆ ತೈಲ ಕಂಪನಿಯ ಸೇಲ್ಸ್ ಆಫೀಸರ್ ರವರಿಗೆ ಗ್ಯಾಸ್ ಏಜೆನ್ಸಿ ಮತ್ತು ಹೊಟೆಲ್ ಮಾಲೀಕರೊಂದಿಗೆ ಸಮನ್ವಯ ಮಾಡಿಕೊಂಡು ಸಮರ್ಪಕ ವಿತರಣೆಗೆ ಮೇಲುಸ್ತುವಾರಿ ಮಾಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರತಿ ಲೋಡ್‌ನಲ್ಲಿ ಕನಿಷ್ಟ 6 ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಸರಬರಾಜು ಮಾಡಲು ಕ್ರಮವಹಿಸುವಂತೆ ಸೂಚಿಸಿದರು.

ಹಾಸ್ಟೆಲ್‌ಗಳಿಗೆ ಮತ್ತು ಸಣ್ಣ ಹೊಟೆಲ್‌ಗಳಿಗೆ ಆದ್ಯತೆ:
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಹಾಸ್ಟೆಲ್, ವಸತಿ ನಿಲಯಗಳಿಗೆ ಬೇಡಿಕೆಗೆ ತಕ್ಕಂತೆ ಕಡ್ಡಾಯವಾಗಿ ಸಿಲಿಂಡರ್ ವಿತರಣೆ ಮಾಡಬೇಕು. ಇಲ್ಲವಾದರೆ ಸಂಬಂಧಪಟ್ಟ ಏಜೆನ್ಸಿಯವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಎಚ್ಚರಿಕೆ ನೀಡಿದರು.

ಅಲ್ಲದೆ, ಸಣ್ಣ ಹೋಟೆಲ್‌ಗಳಿಗೆ 5 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜು ಪುನರಾರಂಭಿಸಲು ಮತ್ತು ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.