Belur: ಮನೆಮನೆಗೆ ಮದ್ಯ: ರಾತ್ರೋ ರಾತ್ರಿ ಪ್ರತಿಭಟನೆ!

ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬೇಸತ್ತ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

Belur ಬೇಲೂರು | ಕನ್ನಡಪೋಸ್ಟ್ ವರದಿ

 ಬೇಲೂರು: ತಾಲೂಕಿನ ರಾಜನಶಿರಿಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿರುವ ಹಿನ್ನೆಲೆ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜನಶಿರಿಯೂರು, ಬಂಡಿಲಕ್ಕನಕೊಪ್ಪಲು, ಕಲ್ಲುಶೆಟ್ಟಿಹಳ್ಳಿ (ಕೇರೆಕೋಡಿ) ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿಕ್ಕ ಅಂಗಡಿಗಳು ಹಾಗೂ ಶಾಲೆಗಳ ಸುತ್ತಮುತ್ತ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದು ಗ್ರಾಮೀಣ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ, ಮದ್ಯದ ದುಷ್ಪರಿಣಾಮದಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಮನೆಮನೆಗಳಲ್ಲಿ ಕಲಹಗಳು ಹೆಚ್ಚಾಗಿವೆ. ಕುಡಿತದ ದಾಸರಾಗಿರುವ ಕೆಲವರು ಮನೆಯ ಖರ್ಚಿನ ಹಣವನ್ನೇ ಮದ್ಯಕ್ಕೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮಸ್ಥೆ ಗೀತಾ ಮಾತನಾಡಿ, “ಮದ್ಯ ಸೇವನೆಯಿಂದ ಆರೋಗ್ಯ ಹಾನಿಯಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಜೀವಹಾನಿಗೂ ಕಾರಣವಾಗುತ್ತಿದೆ. ಕುಟುಂಬಗಳ ಶಾಂತಿ ಭಂಗವಾಗುತ್ತಿದೆ. ತಕ್ಷಣ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.

ಇನ್ನೊಬ್ಬ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಜಯಶಂಕರ್ ಮಾತನಾಡಿ, “ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಬಕಾರಿ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಸರಬರಾಜು ಮೂಲವನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.

ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಿತ ಇಲಾಖೆ ಕಚೇರಿಗಳ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ನಿಂಗೇಗೌಡ, ಲತೇಶ್, ಗಂಗಾಧರ, ಯೋಗೇಶ್, ಜಗದೀಶ್, ಮೋಹನಕುಮಾರ, ಸುಧಾಕರ, ಪರಮೇಶ್, ಮಣಿ, ರೂಪಾ, ಮೀನಾಕ್ಷಿ, ಸುಜಾತಾ, ನೀಲಾವತಿ, ಶಾರದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.