10.3 C
Munich
Home News ರಾಮನಗರ:ಬಿಡದಿಯ ರೆಸಾರ್ಟ್‌ನಲ್ಲಿ ಹೈಡ್ರಾಮಾ: ಕಾಂಗ್ರೆಸ್ ಶಾಸಕರಿಗೆ ₹5 ಕೋಟಿ ಆಫರ್ ಆರೋಪ

ರಾಮನಗರ:ಬಿಡದಿಯ ರೆಸಾರ್ಟ್‌ನಲ್ಲಿ ಹೈಡ್ರಾಮಾ: ಕಾಂಗ್ರೆಸ್ ಶಾಸಕರಿಗೆ ₹5 ಕೋಟಿ ಆಫರ್ ಆರೋಪ

ಬಿಡದಿ ರೆಸಾರ್ಟ್ ಬಳಿ ನಡೆದ ರಾಜಕೀಯ ಹೈಡ್ರಾಮಾ ದೃಶ್ಯ
ಬಿಡದಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷ ಆರೋಪದ ನಡುವೆ ಗಲಾಟೆ

ರಾಮನಗರ ಜಿಲ್ಲೆಯ ಬಿಡದಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ ₹5 ಕೋಟಿ ಆಮಿಷ ಒಡ್ಡಿದ ಆರೋಪದ ನಡುವೆ ಇಬ್ಬರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾಮನಗರ/ಬೆಂಗಳೂರು, ಮಾರ್ಚ್,16,2026 (www.kannadapost.com):  ಒಡಿಶಾ ರಾಜ್ಯಸಭೆ ಚುನಾವಣೆಯ ಹಿನ್ನೆಲೆೆಯಲ್ಲಿ ಅಡ್ಡಮತದಾನ ಮತ್ತು ‘ಆಪರೇಷನ್ ಕಮಲ’ ಭೀತಿ ನಡುವೆ ಕರ್ನಾಟಕದಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆದಿದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯದಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಬ್ಬರನ್ನು ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ಮೂಲಗಳ ಪ್ರಕಾರ, ಒಡಿಶಾದಿಂದ ಬಂದಿದ್ದ ಕೆಲವು ವ್ಯಕ್ತಿಗಳು ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿ ತಮ್ಮ ಪರವಾಗಿ ಮತದಾನ ಮಾಡಲು ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಒಡಿಶಾ ರಾಜ್ಯಸಭೆ ಚುನಾವಣೆ ಹಿನ್ನೆಲೆ

ಒಡಿಶಾ ರಾಜ್ಯಸಭೆ ಚುನಾವಣೆಯ ವೇಳೆ ಅಡ್ಡಮತದಾನ ಸಂಭವಿಸಬಹುದು ಎಂಬ ಆತಂಕದಿಂದ ಕಾಂಗ್ರೆಸ್ ತನ್ನ ಎಂಟು ಮಂದಿ ಶಾಸಕರನ್ನು ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಕಳುಹಿಸಿತ್ತು.

ಈ ಶಾಸಕರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು.

ಈ ರೆಸಾರ್ಟ್‌ನಲ್ಲಿ ಶಾಸಕರು ಭದ್ರತಾ ವ್ಯವಸ್ಥೆಯೊಂದಿಗೆ ವಾಸ್ತವ್ಯದಲ್ಲಿದ್ದರು.

ರೆಸಾರ್ಟ್‌ಗೆ ಬಂದ ಅನುಮಾನಾಸ್ಪದ ವ್ಯಕ್ತಿಗಳು

ಮೂಲಗಳ ಪ್ರಕಾರ, ಶನಿವಾರ ರಾತ್ರಿ ಒಡಿಶಾದಿಂದ ಮೂವರು ವ್ಯಕ್ತಿಗಳು ಬಿಡದಿ ರೆಸಾರ್ಟ್‌ಗೆ ಆಗಮಿಸಿದ್ದರು. ಅವರು ಸ್ಥಳೀಯ ವ್ಯಕ್ತಿಯ ಹೆಸರಿನಲ್ಲಿ ರೆಸಾರ್ಟ್‌ನಲ್ಲಿ ಕೊಠಡಿ ಬುಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ಅವರು ಕಾಂಗ್ರೆಸ್‌ನ ಒಬ್ಬ ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರೆಂಬ ಮಾಹಿತಿ ಹೊರಬಂದಿದೆ.

ಈ ವೇಳೆ ಅವರ ಬಳಿ ಚೆಕ್ ಬುಕ್ ಇದ್ದು, ಖಾಲಿ ಚೆಕ್ ನೀಡಿ ತಮ್ಮ ಪರವಾಗಿ ಮತದಾನ ಮಾಡಲು ಆಮಿಷ ಒಡ್ಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಅನುಮಾನ

ಶಾಸಕರೊಂದಿಗೆ ಮಾತನಾಡುತ್ತಿದ್ದ ಸಂದರ್ಭದ ದೃಶ್ಯ ಸ್ಥಳೀಯ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣವೇ ಆ ವ್ಯಕ್ತಿಗಳ ಬಳಿ ಹೋಗಿ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಒಡಿಶಾದ ಬಿರೇಂದ್ರ ಪ್ರಸಾದ್ ಮತ್ತು ಅಜಿತ್ ಕುಮಾರ್ ಸಾಹು ಎಂಬ ಇಬ್ಬರನ್ನು ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಿಬ್ಬರು ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರಿಂದ ತನಿಖೆ

ಈ ಸಂಬಂಧ ಕಾಂಗ್ರೆಸ್ ಮುಖಂಡರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಬಂಧಿತರನ್ನು ವಿಚಾರಣೆ ನಡೆಸಿ ಘಟನೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

ಕಾಂಗ್ರೆಸ್‌ನ ಗಂಭೀರ ಆರೋಪ

ಈ ಪ್ರಕರಣದ ಕುರಿತು ಮಾತನಾಡಿದ ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಖ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

“ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿದೆ. ನಾಲ್ವರು ಏಜೆಂಟರನ್ನು ರೆಸಾರ್ಟ್‌ಗೆ ಕಳುಹಿಸಿ ಶಾಸಕರೊಂದಿಗೆ ಕುದುರೆ ವ್ಯಾಪಾರ ನಡೆಸಲು ಪ್ರಯತ್ನಿಸಿದ್ದಾರೆ. ನಮ್ಮ ಶಾಸಕರಿಗೆ ಸುಮಾರು ₹5 ಕೋಟಿ ಹಣದ ಆಫರ್ ನೀಡಲಾಗಿದೆ” ಎಂದು ಆರೋಪಿಸಿದರು.

ಖಾಲಿ ಚೆಕ್ ನೀಡಿ ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಈ ಘಟನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕರು ಯಾವುದೇ ರೀತಿಯ ಕುದುರೆ ವ್ಯಾಪಾರಕ್ಕೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಹಣದ ಆಮಿಷ ಒಡ್ಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಮುಂದಿನ ಕ್ರಮವನ್ನು ಕಾನೂನು ನೋಡಿಕೊಳ್ಳಲಿದೆ” ಎಂದು ಅವರು ತಿಳಿಸಿದ್ದಾರೆ.

ಶಾಸಕರ ಸ್ಥಳಾಂತರ

ಈ ಘಟನೆ ಬಳಿಕ ಭದ್ರತಾ ಕಾರಣದಿಂದ ಬಿಡದಿ ರೆಸಾರ್ಟ್‌ನಲ್ಲಿ ವಾಸ್ತವ್ಯದಲ್ಲಿದ್ದ ಒಡಿಶಾದ ಎಂಟು ಮಂದಿ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಮೊದಲು ಅವರನ್ನು ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಕರೆತರಲಾಯಿತು.

ನಂತರ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ವಿಮಾನ ನಿಲ್ದಾಣದ ಬಳಿ ಇರುವ ಡಬಲ್ ಟ್ರೀ ಬೈ ಹಿಲ್ಟನ್ ಹೋಟೆಲ್ನಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ರಾಜಕೀಯ ವಲಯದಲ್ಲಿ ಚರ್ಚೆ

ಈ ಘಟನೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಒಡಿಶಾ ರಾಜ್ಯಸಭೆ ಚುನಾವಣೆಯ ಹಿನ್ನೆಲೆೆಯಲ್ಲಿ ನಡೆದ ಈ ಘಟನೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

error: Content is protected !!