12.9 C
Munich
Home ಜಿಲ್ಲೆ ಹಾಸನ ನೂರು ಕೋಳಿ ತಿಂದು ತೇಗಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು!

ನೂರು ಕೋಳಿ ತಿಂದು ತೇಗಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು!

ದಿಂಡಗೂರು ಸಾತೇನಹಳ್ಳಿಯಲ್ಲಿ ಘಟನೆ ಶಂಕರೇಗೌಡರ ಕೋಳಿ ಸಾಕಣೆ ಶೆಡ್‌ ಗೆ ನುಗ್ಗಿದ್ದ ಚಿರತೆ

ನೂರು ಕೋಳಿ ಸಂಹರಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ
ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಸಾತೇನಹಳ್ಳಿ ಗ್ರಾಮದ
ಶಂಕರೇಗೌಡ ಎಂಬುವರಿಗೆ ಸೇರಿದ ಕೋಳಿ ಶೆಡ್‌ಗೆ ನುಗ್ಗಿದ ಚಿರತೆ ಕಡೆಗೂ ಸೆರೆ ಸಿಕ್ಕಿದೆ.
ಶಂಕರೇಗೌಡರು ತೋಟದ ಮನೆಯಲ್ಲಿ ವಾಸವಿದ್ದು, ಸ್ಪಲ್ಪ ದೂರದಲ್ಲಿ ಶೆಡ್ ನಿರ್ಮಿಸಿ ನಾಟಿ ಕೋಳಿ ಸಾಕಿದ್ದರು. ಈ ವಾಸನೆ ಹಿಡಿದು ಆಹಾರ ಹುಡುಕಿ ಬಂದ ಒಂದು ವರ್ಷ ಹೆಣ್ಣು ಚಿರತೆ ಭಾನುವಾರ ರಾತ್ರಿ ಶೆಡ್‌ಗೆ ನುಗ್ಗಿದೆ.
ಮರುದಿನ ಬೆಳಗ್ಗೆ ಶಂಕರೇಗೌಡ ಶೆಡ್ ಬಳಿ ಬಂದು ನೋಡಿದಾಗ ಚಿರತೆ ಶೆಡ್‌ನಲ್ಲೇ ಬಂಧಿಯಾಗಿರುವುದು ಕಂಡು ಬಂತು. ರಾತ್ರಿ ವೇಳೆ ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡಿ ೧೦೦ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ.
ಶೆಡ್ ಸುತ್ತಲೂ ಮೆಶ್ ಹಾಕಿದ್ದರಿಂದ ಚಿರತೆ ವಾಪಸ್ ಹೋಗಲಾಗದೆ ಅಲ್ಲೇ ಮೂಲೆಯಲ್ಲಿ ಅಡಗಿ ಕುಳಿತಿತ್ತು. ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ ಶಂಕರೇಗೌಡ ಹಾಗೂ ಇತರರು, ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಬೋನಿಟ್ಟು ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾದರು.
ಅಲ್ಲೀವರೆಗೂ ಚಿರತೆ ಹೊರ ಹೋಗದಂತೆ ನೋಡಿಕೊಂಡಿದ್ದ ಸ್ಥಳೀಯರು ಅರಣ್ಯ ಇಲಾಖೆಗೆ ಸಾಥ್ ನೀಡಿ ಸೆರೆ ಹಿಡಿಯಲು ಕೈ ಜೋಡಿಸಿದರು. ಕಡೆಗೂ ದಾರಿ ತಪ್ಪಿ ಬಂದಿದ್ದ ಚಿರತೆ ಸೆರೆ ಸಿಕ್ಕಿದ್ದು, ಭಯಭೀತರಾಗಿದ್ದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೇಳಿ ಕೇಳಿ ತಾಲೂಕು ಬಯಲು ಸೀಮೆ ಆಗಿರುವುದರಿಂದ ಈ ಭಾಗದಲ್ಲಿ ಚಿರತೆ ಹಾವಳಿ ಅಧಿಕವಾಗಿದೆ. ಸೆರೆ ಸಿಕ್ಕಿರುವ ಚಿರತೆ ಸಹ, ಹಲವು ದಿನಗಳಿಂದ ಸಾತೇನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು, ಸಾಕುನಾಯಿ, ೪೦ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ಹಾಕಿತ್ತು.
ಚಿರತೆ ಕಾರ್ಯಾಚರಣೆ ವೇಳೆ ಕೋಳಿ ಫಾರಂ ಬಳಿ ನೂರಾರು ಮಂದಿ ಜಮಾಯಿಸಿದ್ದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಪಲ್ಲವಿ ಇದ್ದರು.
error: Content is protected !!