ಬೆಂಗಳೂರು: ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ

Parrot Astrology Fraud: ಬೆಂಗಳೂರಿನಲ್ಲಿ ಗಿಳಿಶಾಸ್ತ್ರ ಹೇಳುವವನ ಮಾತು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.


Parrot Astrology Fraud: ಬೆಂಗಳೂರಿನಲ್ಲಿ ಐಟಿ ಅಧಿಕಾರಿ ಮೋಸಕ್ಕೆ ಬಲಿ

ಬೆಂಗಳೂರು, ಮಾರ್ಚ್,10,2026 (www.kannadapost.com): ವರ್ಗಾವಣೆಯ ಆಸೆಯಿಂದ ಗಿಳಿಶಾಸ್ತ್ರ ಹೇಳುವವನ ಮಾತು ನಂಬಿದ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಯೊಬ್ಬರು ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಗಿಳಿಶಾಸ್ತ್ರದ ನೆಪದಲ್ಲಿ ನಂಬಿಕೆ ಗಳಿಸಿದ ವ್ಯಕ್ತಿಯೊಬ್ಬರು ಸುಮಾರು 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿ ಆಭರಣಗಳನ್ನು ಪಡೆದು ಪರಾರಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.


Parrot Astrology Fraud: ಗಿಳಿಶಾಸ್ತ್ರ ಹೇಳಿ ನಂಬಿಕೆ ಗಳಿಸಿದ ಆರೋಪಿ

ಬೆಂಗಳೂರಿನ ಐಟಿ ಇಲಾಖೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯೊಬ್ಬರಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆ ಮೇಲೆ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತ ಪರಿಚಯವಾಗಿದ್ದ.

ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್, ಗಿಳಿಯ ಮೂಲಕ ಜಾತಕ ತೆಗೆಯಿಸಿ ಭವಿಷ್ಯ ಹೇಳುತ್ತೇನೆ ಎಂದು ಹೇಳಿ ಅಧಿಕಾರಿಯ ನಂಬಿಕೆ ಗಳಿಸಿದ್ದ.

ಮೊದಲಿಗೆ ಸಾಮಾನ್ಯ ಮಾತುಕತೆಯ ಮೂಲಕ ಅಧಿಕಾರಿಯ ಜೀವನ ಹಾಗೂ ಭವಿಷ್ಯದ ಬಗ್ಗೆ ಹೇಳಿ ಆತ್ಮೀಯತೆ ಬೆಳೆಸಿಕೊಂಡಿದ್ದ.


Parrot Astrology Fraud: ವಿಶೇಷ ಪೂಜೆ ನೆಪದಲ್ಲಿ ಹಣ ವಸೂಲಿ

ನಂತರ “ಜೀವನದಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕು ಹಾಗೂ ಕೆಲಸದಲ್ಲಿ ಪ್ರಗತಿ ಬರಬೇಕು” ಎಂದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ ಶೇಖರ್ ಮೊದಲ ಹಂತದಲ್ಲೇ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ನಡೆಸಿದ್ದಾನೆ.

ಈ ಪೂಜೆಯ ನಂತರವೂ ಪದೇಪದೇ ಕರೆ ಮಾಡಿ ಇನ್ನಷ್ಟು ಪೂಜೆಗಳ ಬಗ್ಗೆ ಹೇಳುತ್ತಾ ಅಧಿಕಾರಿಯ ನಂಬಿಕೆಯನ್ನು ಹೆಚ್ಚಿಸಿಕೊಂಡಿದ್ದಾನೆ.


Parrot Astrology Fraud: ಚಿನ್ನಾಭರಣ ಪಡೆದು ಪರಾರಿ

ಅಧಿಕಾರಿಯ ವರ್ಗಾವಣೆಯ ವಿಷಯ ಕೇಳಿದ ಶೇಖರ್, ದೊಡ್ಡ ಮಟ್ಟದ ಪೂಜೆ ಮಾಡಬೇಕು ಎಂದು ಹೇಳಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಲು ಹೇಳಿದ್ದ.

ಅವುಗಳ ಮೇಲೆ ಪೂಜೆ ಮಾಡಿದರೆ ಎಲ್ಲಾ ಅಡಚಣೆಗಳು ದೂರವಾಗುತ್ತವೆ ಎಂದು ನಂಬಿಸಿದ ಬಳಿಕ ಅಧಿಕಾರಿ ಸುಮಾರು 194 ಗ್ರಾಂ ಚಿನ್ನ ಹಾಗೂ 1.3 ಕೆಜಿ ಬೆಳ್ಳಿ ಆಭರಣಗಳನ್ನು, ಒಟ್ಟು ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಆತನಿಗೆ ಒಪ್ಪಿಸಿದ್ದರು.


Parrot Astrology Fraud: ಒಂದು ವಾರ ಸತಾಯಿಸಿ ನಾಪತ್ತೆ

ಆಭರಣಗಳನ್ನು ಪಡೆದ ನಂತರ “ಒಂದು ದಿನದಲ್ಲೇ ಪೂಜೆ ಮುಗಿಸಿ ವಾಪಸ್ ಕೊಡುತ್ತೇನೆ” ಎಂದು ಹೇಳಿದ ಶೇಖರ್ ನಂತರ “ಪೂಜೆ ಇನ್ನೂ ಪೂರ್ಣವಾಗಿಲ್ಲ” ಎಂದು ಹೇಳುತ್ತಾ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ಸತಾಯಿಸಿದ್ದಾನೆ.

ಕೊನೆಗೆ ಅನುಮಾನಗೊಂಡ ಅಧಿಕಾರಿ ಭಾರತಿನಗರದ ಶ್ರೀ ಸರ್ಕಲ್ ಬಳಿ ತೆರಳಿ ನೋಡಿದಾಗ, ಅಲ್ಲಿಗೆ ಗಿಳಿಯೂ ಇರಲಿಲ್ಲ ಮತ್ತು ಶೇಖರ್ ಕೂಡ ಸ್ಥಳದಿಂದ ಪರಾರಿಯಾಗಿದ್ದ.


Parrot Astrology Fraud: ಪೊಲೀಸರ ತನಿಖೆ ಆರಂಭ

ಈ ಮೂಲಕ ವಂಚನೆಗೆ ಒಳಗಾದುದನ್ನು ಅರಿತ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ ಗಿಳಿಶಾಸ್ತ್ರದ ಹೆಸರಿನಲ್ಲಿ ಜನರನ್ನು ನಂಬಿಸಿ ಹಣ ಹಾಗೂ ಆಭರಣಗಳನ್ನು ಪಡೆದು ಮೋಸ ಮಾಡುವ ವಂಚಕರ ಜಾಲವೂ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.