ಅರಸೀಕೆರೆ: ಹಾರನಹಳ್ಳಿ ಸುಕ್ಷೇತ್ರದಲ್ಲಿರುವ ಇತಿಹಾಸ ಪ್ರಸಿದ್ಧ kodimath ಕೋಡಿಮಠ ಮಹಾಸಂಸ್ಥಾನದಲ್ಲಿ ಮಾರ್ಚ್ 4ರಿಂದ 6ರವರೆಗೆ ಮೂರು ದಿನಗಳ ಕಾಲ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ನಡೆಯಲಿದೆ. ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಈ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ.
ರಾಜ್ಯದಲ್ಲಿಯೇ “ಕಲ್ಪತರು ನಾಡು ಮತ್ತು ಸಿದ್ಧರ ಬೀಡು” ಎಂದು ಖ್ಯಾತಿ ಪಡೆದಿರುವ ಈ ಪವಿತ್ರ ಕ್ಷೇತ್ರದಲ್ಲಿ ಪ್ರತಿಮಾಸವೂ ಹುಣ್ಣಿಮೆ ಕಟ್ಟಳೆ, ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಹಾಗೂ ಪಾಲ್ಗುಣ ಮಾಸದಲ್ಲಿ ಮೂರು ದಿನಗಳ ಮಹದೇಶ್ವರ ಜಾತ್ರೆ ಆಚರಿಸುವ ಸಂಪ್ರದಾಯವಿದೆ. ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪುರಾಣ ಪ್ರವಚನಗಳು ಮತ್ತು ಧರ್ಮೋಪದೇಶಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ.
ಜಾತ್ರಾ ಕಾರ್ಯಕ್ರಮಗಳ ವಿವರ
ಮಾರ್ಚ್ 4
ಮಠದ ಪರಂಪರೆಯಂತೆ ಹುಣ್ಣಿಮೆ ಕಟ್ಟಳೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಿಗ್ಗೆ ಕೋಡಿಮಠ ಹಾಗೂ ಮಹದೇಶ್ವರ ಬೆಟ್ಟದಲ್ಲಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಷಟ್ಸ್ಥಳ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಅಣ್ಣಾಯಕನಹಳ್ಳಿ ಮತ್ತು ಹಾರನಹಳ್ಳಿ ಹಳ್ಯಾಕಟ್ಟ ಭಕ್ತರಿಂದ ಮಹಾ ಸಿಂಹಾಸನ ಪೂಜೆ ನಡೆಯಲಿದೆ. ಬಳಿಕ ಮಾಡಾಳು ಮುದ್ದೇಗೌಡರ ವಂಶಸ್ಥರಿಂದ ರಜತ ಪಲ್ಲಕ್ಕಿ ಪೂಜೆ ನಡೆಯಲಿದೆ.
ಸಂಜೆ 6 ಗಂಟೆಗೆ ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಮಾರ್ಚ್ 5
ಜಗದ್ಗುರುಗಳು ಭಕ್ತರೊಂದಿಗೆ ಪಾದಯಾತ್ರೆಯಲ್ಲಿ ಹಾರನಹಳ್ಳಿ ಗ್ರಾಮ ಪ್ರವೇಶಿಸಲಿದ್ದಾರೆ. ಭಕ್ತರ ಮನೆಗಳಲ್ಲಿ ಪಾದಪೂಜೆ ಹಾಗೂ ಭಿಕ್ಷಾಟನೆ ನಡೆಯಲಿದೆ.
ರಾತ್ರಿ 8 ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಜಡೆ ಸಂಸ್ಥಾನ ಮಠದ ಮಹಾಂತ ಶಿವಯೋಗಿಗಳ ಪಾದಪೂಜೆ ನಡೆಯಲಿದೆ.
ಮಾರ್ಚ್ 6
ವಿವಿಧ ಕಲಾತಂಡಗಳೊಂದಿಗೆ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾರನಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ನಂತರ ಮಹದೇಶ್ವರ ಬೆಟ್ಟಕ್ಕೆ ಪಲ್ಲಕ್ಕಿ ಉತ್ಸವ ಸಾಗಲಿದೆ.
ಅಲ್ಲಿ ಹೆಜ್ಜೆ ನಮಸ್ಕಾರ, ಮಹಿಳೆಯರಿಂದ ಗೂಗ್ಗಳೋತ್ಸವ ಮತ್ತು ಮುತ್ತೈದೆಯರ ಸೇವೆ ನಡೆಯಲಿದೆ. ಶ್ರೀಗಳು ಲಿಂಗಾನು ಲಿಂಗ ಪೂಜಾ ಅನುಷ್ಠಾನ ನಡೆಸಲಿದ್ದಾರೆ.
ಮಹದೇಶ್ವರರ ಪವಾಡ – ಭಕ್ತರಲ್ಲಿ ಅಪಾರ ನಂಬಿಕೆ
ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದ ಉಳಿದಿದ್ದರೆ ಅದನ್ನು ವಿಶೇಷ ಗುಂಡಿಯಲ್ಲಿ ಇಟ್ಟು ಮಣ್ಣು ಮುಚ್ಚುವ ಸಂಪ್ರದಾಯವಿದೆ. ಮುಂದಿನ ವರ್ಷದ ಜಾತ್ರೆಯಲ್ಲಿ ಗುಂಡಿಯನ್ನು ತೆರೆದಾಗ ಪ್ರಸಾದ ಕೆಡದೆ ಇರುವುದನ್ನು ಭಕ್ತರು ಮಹದೇಶ್ವರರ ಪವಾಡ ಎಂದು ನಂಬುತ್ತಾರೆ.
ಧಾರ್ಮಿಕ ಸಮಾರಂಭ
ಸಂಜೆ 6 ಗಂಟೆಗೆ ಶ್ರೀ ಶಿವಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಮಠಾಧೀಶರು, ಶಾಸಕರು, ಮಾಜಿ ಶಾಸಕರು, ಸಾಹಿತಿಗಳು, ವಿದ್ವಾಂಸರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.










