ಭ್ರಷ್ಟಾಚಾರದ ವಿರುದ್ಧ ಜನರು ಧೈರ್ಯವಾಗಿ ನಿಲ್ಲಬೇಕು: ನಿಶ್ಚಲಾನಂದನಾಥ ಶ್ರೀ

ಚನ್ನರಾಯಪಟ್ಟಣದಲ್ಲಿ ನಡೆದ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಪದಗ್ರಹಣ ಸಮಾರಂಭದಲ್ಲಿ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಭ್ರಷ್ಟಾಚಾರ ವಿರುದ್ಧ ಸಂಘಟಿತ ಹೋರಾಟದ ಅಗತ್ಯವನ್ನು ಒತ್ತಿ ಹೇಳಿದರು.

ಚನ್ನರಾಯಪಟ್ಟಣ: ಜನರು ಭ್ರಷ್ಟಾಚಾರವನ್ನು ಧೈರ್ಯವಾಗಿ ವಿರೋಧಿಸುವ ಮನಸ್ಸು ಮಾಡಿದರೆ ಅದನ್ನು ತಗ್ಗಿಸಲು ಸಾಧ್ಯ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ, ಕೆಂಗೇರಿ (ಬೆಂಗಳೂರು) ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಪಟ್ಟಣದ ಕರ್ನಾಟಕ ಸಂಘದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಹಾಗೂ ಕಾರ್ಯಾಚರಣೆ ಸಮಿತಿ – ಚನ್ನರಾಯಪಟ್ಟಣ ಘಟಕದ ಪದಗ್ರಹಣ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭ್ರಷ್ಟಾಚಾರವನ್ನು ಕೇವಲ ಆರೋಪ ಮಾಡುವುದರಿಂದ ಅಲ್ಲ, ತಿಳುವಳಿಕೆ ಮತ್ತು ಸಂಘಟಿತ ಹೋರಾಟದ ಮೂಲಕ ಕಡಿಮೆ ಮಾಡಬಹುದು ಎಂದು ಹೇಳಿದರು.

ಸಂಘಟಿತ ಹೋರಾಟದಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ

ಭ್ರಷ್ಟಾಚಾರವೆಂದರೆ ಕೇವಲ ಹಣ ಪಡೆಯುವುದು ಮಾತ್ರವಲ್ಲ; ಆ ರೀತಿಯ ಯೋಚನೆ ಕೂಡ ಭ್ರಷ್ಟಾಚಾರವೇ ಆಗುತ್ತದೆ. ಮನಸ್ಸಿನಲ್ಲಿಯೂ ಭ್ರಷ್ಟಾಚಾರದ ಪರವಾಗಿ ಯೋಚಿಸಬಾರದು. ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ಸಂಘಟಿತವಾಗಿ ನಿಂತರೆ ಅದನ್ನು ಹಂತ ಹಂತವಾಗಿ ಕಡಿಮೆ ಮಾಡಬಹುದು ಎಂದು ಸ್ವಾಮೀಜಿ ಹೇಳಿದರು.

ಚನ್ನರಾಯಪಟ್ಟಣ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿರುವ ಮಂಜುನಾಥ್ ಎನ್.ಎಸ್ ಅವರಿಗೆ ಶುಭಾಶಯ ಕೋರಿ, ಭ್ರಷ್ಟಾಚಾರ ವಿರುದ್ಧದ ಹೋರಾಟ ಸುಲಭವಲ್ಲ; ಅನೇಕ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಆದರೆ ದೃಢ ಸಂಕಲ್ಪ ಮತ್ತು ಸಂಘಟನೆ ಇದ್ದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಸಮಾಜದಲ್ಲಿ ಇಂತಹ ಸಂಘಟನೆಗಳ ಅಗತ್ಯ

ಹಿಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ಜನರು ಏಕಾಂಗಿಯಾಗಿ ಎದುರಿಸುತ್ತಿದ್ದರು. ಈಗ ಇಂತಹ ಸಂಘಟನೆಗಳು ಹುಟ್ಟಿಕೊಂಡಿರುವುದು ಸಾಂಸ್ಥಿಕ ಹೋರಾಟಕ್ಕೆ ಬಲ ನೀಡುತ್ತದೆ. ಜನರು ಗುಂಪಾಗಿ ಹೋಗಿ ಪ್ರಶ್ನಿಸಿದರೆ ಭ್ರಷ್ಟಾಚಾರಿಗಳು ಸಹ ಹೆದರುತ್ತಾರೆ ಎಂದು ಅವರು ಹೇಳಿದರು.

ಕಾನೂನು ಸಹಕಾರ ನೀಡಲು ಸಿದ್ಧ: ನಿವೃತ್ತ ನ್ಯಾಯಾಧೀಶ

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ನಿವೃತ್ತ ಸೆಷನ್ಸ್ ನ್ಯಾಯಾಧೀಶ ಬಿ. ವೆಂಕಟೇಶ್ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ತಾನು ಸಹ ಕೈಜೋಡಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ಕಾನೂನು ಸಲಹೆ ಹಾಗೂ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.

ಸಂಘಟನೆಯ ಉದ್ದೇಶ

ಅಧ್ಯಕ್ಷರಾಗಿ ಮಾತನಾಡಿದ ಮಂಜುನಾಥ್ ಎನ್.ಎಸ್ ಅವರು, ಭಾರತದಲ್ಲಿ ಭ್ರಷ್ಟಾಚಾರ ಗಂಭೀರ ಸಮಸ್ಯೆಯಾಗಿದ್ದು, ದೇಶವು ಜಾಗತಿಕ ಭ್ರಷ್ಟಾಚಾರ ಪಟ್ಟಿಯಲ್ಲಿ 91ನೇ ಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೇಶ್ ಶುಕ್ಲಾ ಅವರು 2012ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.

ಭಾರತ ಸರ್ಕಾರದ ನೀತಿ ಆಯೋಗದ ಅಡಿಯಲ್ಲಿ ನೋಂದಾಯಿತವಾಗಿರುವ ಈ ಸಂಸ್ಥೆ ದೇಶಾದ್ಯಂತ ಪಾರದರ್ಶಕ ಆಡಳಿತ ಮತ್ತು ನ್ಯಾಯಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪದಾಧಿಕಾರಿಗಳ ಪದಗ್ರಹಣ

ಕಾರ್ಯಕ್ರಮದಲ್ಲಿ

  • ಅಧ್ಯಕ್ಷರು – ಮಂಜುನಾಥ್ ಎನ್.ಎಸ್
  • ಪ್ರಧಾನ ಕಾರ್ಯದರ್ಶಿ – ಎ.ಎಂ. ಜಯರಾಮ್
  • ಖಜಾಂಚಿ – ಎಸ್.ಎಂ. ಪುಷ್ಪ
  • ಕಾರ್ಯಾಧ್ಯಕ್ಷರು – ಯಶೋದ
  • ಉಪಾಧ್ಯಕ್ಷರು – ರಾಘವೇಂದ್ರ ಬಿ, ಸೋಮನಾಥ ಎನ್.ಜೆ, ಡಿ.ಕೆ. ಮಧು
  • ಜಂಟಿ ಕಾರ್ಯದರ್ಶಿಗಳು – ವೇದ ಕೆ.ಎಸ್, ಅರುಣ್ ಕುಮಾರ್ ಬಿ.ಎಲ್
  • ಸಂಘಟನಾ ಕಾರ್ಯದರ್ಶಿಗಳು – ಭಗವಾನ್ ಎನ್, ಮಹದೇವ ಸಿ.ಎಲ್, ನಾಗರಾಜ್ ಡಿ.ಸಿ, ಸಿ.ಎಸ್. ಶೇಖರ್
  • ಸಾಂಸ್ಕೃತಿಕ ಕಾರ್ಯದರ್ಶಿ – ಸರಸ್ವತಿ ಸಿ.ಎಂ
  • ಕಾರ್ಯದರ್ಶಿ – ಸಿದ್ದೇಶ್ ಹೆಚ್.ವಿ

ಇವರು ಪದಗ್ರಹಣ ಸ್ವೀಕರಿಸಿದರು. ಸ್ವಾಮೀಜಿ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ದಯಾನಂದ್, ವಿಭಾಗೀಯ ಅಧ್ಯಕ್ಷ ಶ್ರೀಶೈಲ ಕುಂಬಾರ, ಮಾಧ್ಯಮ ಕಾರ್ಯದರ್ಶಿ ಪ್ರಸನ್ನ ಕುಮಾರ್, ಹಾಸನ ಜಿಲ್ಲಾಧ್ಯಕ್ಷ ಮಲ್ಲೇಶ್ ಟಿ, ಚನ್ನರಾಯಪಟ್ಟಣ ಸಂಚಾಲಕಿ ಪುಷ್ಪಾವತಿ ಕೆ.ಎಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.