ಮಂಡ್ಯ: ಸಿದ್ದರಾಮಯ್ಯ ಸರ್ಕಾರದಲ್ಲಿ ಸ್ವಾಮೀಜಿಗೂ ಸಿಕ್ತು “ಪ್ರಮೋಷನ್”! ಅಧಿಕಾರಿಗಳ ಮಹಾ ಎಡವಟ್ಟು ಬಹಿರಂಗ

ಮಂಡ್ಯ: ರಾಜ್ಯ ಸರ್ಕಾರ 20 ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ ವೇಳೆ ನಡೆದ ಮಹಾ ಎಡವಟ್ಟು ಇದೀಗ ಚರ್ಚೆಗೆ ಗ್ರಾಸವಾಗಿದೆ. ಸ್ವಯಂ ನಿವೃತ್ತಿ ಪಡೆದು ನಂತರ ಸನ್ಯಾಸ ಸ್ವೀಕರಿಸಿ ಪೀಠಾಧಿಪತಿಯಾಗಿರುವ ಹೆಚ್.ಎಲ್. ನಾಗರಾಜ್ ಅವರ ಹೆಸರನ್ನೂ ಬಡ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರಸ್ತುತ ಅವರು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿಯಾಗಿ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಚ್.ಎಲ್. ನಾಗರಾಜ್ ಅವರು ಈ ಹಿಂದೆ ಕೆ.ಎ.ಎಸ್. ಅಧಿಕಾರಿಯಾಗಿದ್ದು, ನಿವೃತ್ತಿಗೆ ಮುನ್ನ ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಸ್ವಯಂ ನಿವೃತ್ತಿ ಪಡೆದು ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಆದರೆ ಇತ್ತೀಚೆಗೆ ಹೊರಬಿದ್ದ ಬಡ್ತಿ ಆದೇಶದಲ್ಲಿ ಅವರ ಹೆಸರನ್ನು “ಸ್ಥಳ ನಿರೀಕ್ಷಣೆಯಲ್ಲಿ” ಎಂದು ನಮೂದಿಸಿ ಬಡ್ತಿ ನೀಡಿರುವುದು ಗಮನಾರ್ಹವಾಗಿದೆ.

ಈ ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಹೊರಡಿಸಿದ್ದಾರೆ. ನಿವೃತ್ತಿ ಪಡೆದ ಅಧಿಕಾರಿಯೊಬ್ಬರನ್ನು ಪರಿಶೀಲನೆ ಮಾಡದೆ ಬಡ್ತಿ ಪಟ್ಟಿಯಲ್ಲಿ ಸೇರಿಸಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವೇ ಎಂಬ ಪ್ರಶ್ನೆ ಎದ್ದಿದೆ. ಸಂಬಂಧಪಟ್ಟ ಇಲಾಖೆಯಲ್ಲಿ ದಾಖಲೆ ಪರಿಶೀಲನೆ ಮತ್ತು ಸೇವಾ ವಿವರಗಳ ಸಮನ್ವಯದಲ್ಲಿ ಗಂಭೀರ ಲೋಪವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಈ ಘಟನೆ ಸರ್ಕಾರದ ಕಚೇರಿ ಕಾರ್ಯಪದ್ಧತಿ ಹಾಗೂ ಮಾಹಿತಿಯ ನವೀಕರಣ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ “ಸ್ವಾಮೀಜಿಗೂ ಸರ್ಕಾರದಲ್ಲಿ ಪ್ರಮೋಷನ್!” ಎಂಬ ಟೀಕೆಗಳು ಹರಿದಾಡುತ್ತಿವೆ. ತಪ್ಪು ಹೇಗೆ ನಡೆದಿದೆ? ಜವಾಬ್ದಾರಿ ಯಾರಿಗೆ? ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ.