ಹಾಸನ | ಫೆಬ್ರವರಿ 14, 2026: ಹಾಸನ ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ವೀರಯೋಧರ ಸ್ಮರಣಾರ್ಥ 7ನೇ ವರ್ಷದ ‘ಕರಾಳ ದಿನ’ವನ್ನು ಆಚರಿಸಿ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಭೀಕರ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಪ್ರತಿವರ್ಷ ಫೆಬ್ರವರಿ 14ನ್ನು ‘ಕರಾಳ ದಿನ’ವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.
40 ದೀಪಗಳ ಮೂಲಕ ಗೌರವ ಸಮರ್ಪಣೆ
ಕಾರ್ಯಕ್ರಮದಲ್ಲಿ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವೀರಯೋಧರಿಗೆ ನಮನ ಸಲ್ಲಿಸಿದರು. 40 ವೀರಯೋಧರ ನೆನಪಿನ ಸಂಕೇತವಾಗಿ 40 ದೀಪಗಳನ್ನು ಬೆಳಗಿಸಿ ಗೌರವ ಸೂಚಿಸಲಾಯಿತು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಸಂದೇಶ
10ನೇ ತರಗತಿಯ ನಕ್ಷತ್ರ ಹಾಗೂ ಅಹಾನಾ ದತ್ತ ಪುಲ್ವಾಮಾ ದಾಳಿಯ ಹಿನ್ನೆಲೆ ಕುರಿತು ಮಾತನಾಡಿದರು. 9ನೇ ತರಗತಿಯ ಇಶಾಂತ್ ಎಂ. ಭಾರತೀಯ ಸೈನ್ಯದ ಸೇವೆ ಹಾಗೂ ಮಿಲಿಟರಿ ಕಾರ್ಯಾಚರಣೆಗಳ ಮಹತ್ವವನ್ನು ವಿವರಿಸಿದರು.
ದೇಶದ ಭದ್ರತೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು
ಶಾಲೆಯ ಕಾರ್ಯದರ್ಶಿ ಶ್ರೀ ಹೆಚ್.ಪಿ. ಕಿರಣ್ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿದ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ದೇಶ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಕೆ.ಎಮ್. ನಾಗರಾಜು ಅವರು ಮಾತನಾಡಿ, ದೇಶದ ಭದ್ರತೆ ಮತ್ತು ಶಾಂತಿ ಸುವ್ಯವಸ್ಥೆಗೆ ಸೈನಿಕರ ಸೇವೆ ಶ್ಲಾಘನೀಯ. ನಮ್ಮ ಸೈನ್ಯಕ್ಕೆ ಸದಾ ಗೌರವ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯೋಧಗೀತೆ, ದೇಶಭಕ್ತಿಗೀತೆ, ರಾಷ್ಟ್ರಗೀತೆ ಹಾಗೂ ನುಡಿನಮನ ಕಾರ್ಯಕ್ರಮಗಳು ನಡೆದವು. ಶಾಲೆಯ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










