ಬೆಂಗಳೂರು | ಫೆಬ್ರವರಿ 13, 2026: ಮಂಡ್ಯ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಆದೇಶ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ Siddaramaiah ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೋ ಕಿಡಿಗೇಡಿಗಳು ಸಚಿವಾಲಯದ ನಕಲಿ ಟಿಪ್ಪಣಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಅಪರಾಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೂರು ದಾಖಲು, ಪೊಲೀಸ್ ತನಿಖೆ ಆರಂಭ
ಈ ಸಂಬಂಧ ಸಚಿವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದು, ಪ್ರಕರಣದ ಹಿಂದಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಕಲಿ ಸುದ್ದಿಗಳ ಬಗ್ಗೆ ಎಚ್ಚರಿಕೆ
ಫೋಟೋಶಾಪ್ ಹಾಗೂ ಎಐ ತಂತ್ರಜ್ಞಾನದ ಯುಗದಲ್ಲಿ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹಂಚಿಕೊಳ್ಳುವುದು ಕೂಡ ಅಪರಾಧವಾಗಬಹುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ಮಾಹಿತಿ ಶೇರ್ ಮಾಡುವ ಮುನ್ನ ಅದರ ಪ್ರಾಮಾಣಿಕತೆಯನ್ನು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ಸಕಾರಾತ್ಮಕ ಟೀಕೆಗೆ ಮುಕ್ತ, ಸುಳ್ಳು ಅಪಪ್ರಚಾರಕ್ಕೆ ಅವಕಾಶ ಇಲ್ಲ”
ಸಕಾರಾತ್ಮಕ ಟೀಕೆಗಳಿಗೆ ಸರ್ಕಾರ ಸದಾ ಮುಕ್ತವಾಗಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ Siddaramaiah ಸ್ಪಷ್ಟಪಡಿಸಿದ್ದಾರೆ.










