ಹಾಸನ: ಹಾಸನ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ವೈನರಿ ಕಾರ್ಖಾನೆಯಿಂದ ಕೊಳಚೆ ನೀರು ನಾಗತವಹಳ್ಳಿ ಗ್ರಾಮದ ಅತ್ತಿಕಟ್ಟೆ ಕೆರೆಗೆ ಹರಿದ ಪರಿಣಾಮ ಕೆರೆ ಮೀನುಗಳು ಸಾವನ್ನಪ್ಪಿದ್ದು ಹುಲ್ಲುಗಾವಲು ಸಂಪೂರ್ಣ ಭಸ್ಮವಾಗಿ ದುರ್ವಾಸನೆ ಬೀರುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ಕೆರೆಗೆ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಕಾರ್ಖಾನೆ ಮಾಲೀಕರಿಗೆ ಪ್ರಶ್ನೆ ಮಾಡಲಾಗಿ ಈ ವೇಳೆ ಅವರು ಗ್ರಾಮಸ್ಥರನ್ನು ನಿಂದಿಸಿದರು ಎಂಬ ಕಾರಣಕ್ಕೆ ಗ್ರಾಮಸ್ಥರು ಹಾಗೂ ಮಾಲೀಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವೇಳೆ ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಮಾತನಾಡಿ, ನಮ್ಮ ಗ್ರಾಮದ ಅತ್ತಿಕಟ್ಟೆ ಕೆರೆಯಿಂದ ನೂರಾರು ದನಕರುಗಳು ನೀರು ಕುಡಿಯಲು ಹಾಗೂ ಮೇವಿಗೆ ಅವಲಂಬಿತವಾಗಿವೆ ಆದರೆ ಇದೀಗ ಕೊಳಚೆ ನೀರಿನಿಂದ ಕೆರೆ ಸಂಪೂರ್ಣ ಹಾಳಾಗಿದ್ದು ಇಲ್ಲಿನ ಮೀನುಗಳು ಸಾವನ್ನಪ್ಪಿ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಹಿಂದೆ ರೈತರಿಗೆ ಆಧಾರವಾಗಿದ್ದ ನಾಲ್ಕು ಹಸುಗಳು ಈ ಕೊಳಚೆ ನೀರು ಕುಡಿದು ಸಾವನ್ನಪ್ಪಿವೆ, ಅಲ್ಲದೆ ಕೊಳಚೆ ನೀರಿನ ದುರ್ವಾಸನೆಯಿಂದ ಇಲ್ಲಿನ ಜನರು ಅನಾರೋಗ್ಯ ಪೀಡಿತರಾಗಿದ್ದಾರೆ. ಈ ಹಿಂದೆ ಹಲವು ಬಾರಿ ಈ ಬಗ್ಗೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಯುನೈಟೆಡ್ ವೈನರಿ ಎಂಬ ಈ ಕಾರ್ಖಾನೆ ಕಾನೂನು ಬಾಹಿರವಾಗಿ ನಡೆಯುತ್ತಿದೆ, ವೈಲ್ಡಿಂಗ್ ಶಾಪ್ ಗೆ ಲೈಸೆನ್ಸ್ ಪಡೆಸಿಕೊಂಡು ವೈನ್ ತಯಾರಿಕೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ವೈನ್ ತಯಾರಿ ಮಾಡಲು ಯಾವುದೇ ಲೈಸೆನ್ಸ್ ಪಡೆದಿಲ್ಲ ಈ ಬಗ್ಗೆ ಕೆ.ಎ.ಐ.ಡಿ.ಬಿ ಅಧಿಗರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಗ್ರಾಮದ ರೇಣುಕಾ, ಪುಟ್ಟರಾಮು, ಸ್ವಾಮಿ, ರಾಜ, ಸರೋಜಾ, ಯಶೋಧ, ಯೋಗೀಶ್, ದಿನೇಶ್, ಚಂದನ, ಪುಟ್ಟರಾಜು, ಕುಮಾರ, ಕಿರಣ್, ವರಾಜ, ಮೋಹನ್, ಜಯಮ್ಮ, ವನಜಾಕ್ಷಿ ಇತರರು ಉಪಸ್ಥಿತರಿದ್ದರು.










