ಚನ್ನರಾಯಪಟ್ಟಣ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಈ ಬಾರಿಯ ಚುನಾವಣೆಯು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ತಾಲ್ಲೂಕಿನ ಶ್ರೀನಿವಾಸಪುರದ ಬಳಿಯಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಕಾನೂನು ರೀತಿ ನಿಯಮಾನುಸಾರ ಚುನಾವಣೆ ನಡೆಯಬೇಕು ಎಂದರು.
2011 ರಲ್ಲಿ ಚುನಾವಣೆ ನಡೆದಿದ್ದು ಇಲ್ಲಿಗೆ 15 ವರ್ಷಗಳು ಕಳೆದಿವೆ. ಕರೋನಾ ಹಾಗೂ ಇತರೆ ಇಲ್ಲದ ಕಾರಣ ತೋರಿಸಿ 10 ವರ್ಷ ಆಡಳಿತ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಎರಡು ವರ್ಷಗಳ ಹಿಂದೆಯೇ ಚುನಾವಣೆ ನಡೆಸಲೇಬೇಕೆಂದು ಒತ್ತಾಯಿಸಲಾಗಿದ್ದರು ಇದುವರೆಗೂ ಕಾಲ ಮುಂದೂಡುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಆದರೆ ಚುನಾವಣೆ ನಡೆಸಲೇಬೇಕಾದ ದಿನ ಹತ್ತಿರವಾಗಿದೆ. ಮಾರ್ಚ್ ಇಲ್ಲವೇ ಏಪ್ರಿಲ್ ನಲ್ಲಿ ಚುನಾವಣೆ ನಡೆಯುವ ಬಗ್ಗೆ ಚರ್ಚಿಸಲಾಗಿದೆ ಎಂದರು.
95-96 ನೇ ಸಾಲಿನ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಗಲಾಟೆಯೇ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಷಡ್ಯಂತ್ರ, ಪಿತೂರಿ ಹಾಗೂ ಅಹಿತಕರ ಘಟನೆ ನಡೆಯದಂತೆ ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
35 ಸಾವಿರ ಷೇರುದಾರ ಅಥವಾ ಮತದಾರರನ್ನು ಹೊಂದಿದ್ದು ಕಳೆದ 15 ವರ್ಷಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವುದಿಲ್ಲ. ಬಹುತೇಕರು ನಿಧನ ಹೊಂದಿದ್ದು ಕೆಲವರದ್ದು ಎರಡು ಕಡೆ ಪಟ್ಟಿಗಳಲ್ಲಿ ಸೇರ್ಪಡೆಯಾಗಿರುತ್ತದೆ. ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಎಲ್ಲಾ ವಿಚಾರಗಳಲ್ಲಿಯೂ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಸತ್ತವರಿಗೂ ಷೇರುದಾರರ ಸಕ್ಕರೆ ನೀಡಲಾಗುತ್ತಿದೆ. ನಿಧನ ಹೊಂದಿರುವವರ ಹೆಸರುಗಳು ಸಹ ಇನ್ನೂ ಪಟ್ಟಿಯಲ್ಲಿ ಉಳಿದಿವೆ. 20 ವರ್ಷಗಳ ಹಿಂದೆ ನಿಧನ ಹೊಂದಿರುವ ವ್ಯಕ್ತಿಯ ಮನೆಗೆ ಸಕ್ಕರೆ ನೀಡಲಾಗುತ್ತಿದೆ. ಹತ್ತು ಹಲವು ಲೋಪಗಳಿದ್ದು ಆಡಳಿತ ಮಂಡಳಿ ವೀಕ್ ಆಗಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಅದೇನೇ ಇರಲಿ ಮತದಾರರ ಗುರುತಿನ ಚೀಟಿಯನ್ನು ಪರಿಷ್ಕರಣಿಯೊಂದಿಗೆ ಹೊಸದಾಗಿ ನೀಡಬೇಕು. ಕಬ್ಬು ಬೆಳೆಗಾರ ರೈತನಿಗೆ ಮಾತ್ರ ಷೇರು ನೀಡಬೇಕು. ಆದರೆ ಜಮೀನು ಇಲ್ಲದಿದ್ದರೂ ಬಹುತೇಕರಿಗೆ ಷೇರು ನೀಡಲಾಗಿದೆ. ಅಲ್ಲದೆ ಒಂದೇ ದಿನ 5 ಸಾವಿರ ಷೇರುದಾರರ ಹೆಸರಿನಲ್ಲಿ ರಸೀದಿ ಹರಿಯಲಾಗಿದೆ. ಅಧಿಕಾರಿಗಳು ಬಿಗಿ ಭದ್ರತೆಯೊಂದಿಗೆ ಕಠಿಣ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಬೇಕು ಎಂದು ಅಗ್ರಹಿಸಿದರು.
ವ್ಯವಸ್ಥಾಪಕ ನಿರ್ದೇಶಕ ಆರ್.ಜೆ.ಕಾಂತರಾಜ್ ಮಾತನಾಡಿ, ಈಗಾಗಲೇ ಪರಿಷ್ಕರಣೆ ಕಾರ್ಯ ಜರುಗಿದ್ದು 30,500 ಮತದಾರರು ಪಟ್ಟಿಯಲ್ಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ತಂಡ ರಚನೆ ಮಾಡಲಾಗಿದ್ದು ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದರು.
ಮಾರ್ಚ್ 15 ಕ್ಕೆ ಚುನಾವಣೆ ನಿಗದಿ ಮಾಡಲಾಗಿತ್ತು. ಬಿಇಓ ಅವರಿಗೆ ಪತ್ರ ಬರೆಯಲಾಗಿದ್ದು ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವುದಾಗಿ ಹಿಂಬರಹ ನೀಡಿರುವ ಪರಿಣಾಮ ಮುಂದೂಡಲಾಗಿದೆ. ಏಪ್ರಿಲ್ 5 ಇಲ್ಲವೇ 12 ರಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಪ್ರಿಲ್ ಮೂರರ ಒಳಗಾಗಿ ಮತದಾರರು ಹೊಸ ಚೀಟಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ನಿರ್ದೇಶಕ ರವೀಶ್, ಪ್ರಮುಖರಾದ ಮಂಜುನಾಥ್ ಸಿ.ಟಿ.ಅಶೋಕ್, ಅಣತಿ ಆನಂದ್, ಶಿವರಾಂ, ರಾಮೇಗೌಡ, ಗಿರೀಶ್ ಸೇರಿದಂತೆ ಇತರರು ಹಾಜರಿದ್ದರು.
Former Legislative Council member M.A. Gopalaswamy said that this time’s elections to the board of directors of the Hemavati Cooperative Sugar Factory should be held in a proper manner.










