8.9 C
Munich
Home News ಹಾಸನ: 200 ವರ್ಷಗಳ ನಂತರ ಪುನರುಜ್ಜೀವನಗೊಂಡ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ಸ್ವಾಮಿ ದೇಗುಲ

ಹಾಸನ: 200 ವರ್ಷಗಳ ನಂತರ ಪುನರುಜ್ಜೀವನಗೊಂಡ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ಸ್ವಾಮಿ ದೇಗುಲ

ಹಾಸನ: ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಸುಮಾರು ಎರಡು ಶತಮಾನಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಹೊಯ್ಸಳರ ಕಾಲದ ಅಪರೂಪದ ಚನ್ನಕೇಶವಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೊಯ್ಸಳ ಸಾಮ್ರಾಜ್ಯದ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಂಡಿದ್ದ ಈ ದೇವಸ್ಥಾನವು ಕಾಲಾನಂತರದಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಸುಮಾರು 200 ವರ್ಷಗಳ ಹಿಂದೆಯೇ ಹಾಳಾಗಿತ್ತು. ರಾಜ್ಯದ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ವಾಸ್ತುಶಿಲ್ಪದ ಚನ್ನಕೇಶವ ಸ್ವಾಮಿ ಮೂರ್ತಿ ಈ ಗ್ರಾಮದಲ್ಲಿದ್ದದ್ದು ಈ ದೇವಾಲಯದ ವಿಶೇಷತೆ.

ಹಿರಿಯರಿಂದ ಕೇಳಿಬಂದಿದ್ದ ಈ ದೇವಾಲಯದ ಇತಿಹಾಸವು ಗ್ರಾಮಸ್ಥರಲ್ಲಿ ಅಪಾರ ಗೌರವ ಹಾಗೂ ಭಕ್ತಿಭಾವ ಮೂಡಿಸಿತ್ತು. ಇದೀಗ ಅದೇ ಭಕ್ತಿಭಾವದಿಂದ ಗ್ರಾಮಸ್ಥರು ಒಗ್ಗಟ್ಟಾಗಿ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಂಕಲ್ಪಿಸಿದ್ದಾರೆ.

ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗ್ರಾಮದ ಹಿರಿಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಸೇರಿ ಜೀರ್ಣೋದ್ಧಾರ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಮಣ್ಣಿನಲ್ಲಿ ಹೂತುಹೋಗಿದ್ದ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಮತ್ತೆ ಎತ್ತಿ ಹಿಡಿಯುವ ಈ ಮಹತ್ವದ ಕಾರ್ಯಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.

ಇಂದಿನ ಗುದ್ದಲಿ ಪೂಜೆಯೊಂದಿಗೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಧಿಕೃತವಾಗಿ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಹೊಯ್ಸಳರ ಕಾಲದ ವಿಶಿಷ್ಟ ಕೆತ್ತನೆಗಳನ್ನು ಒಳಗೊಂಡ ಕುರುಹುಗಳು ಈ ದೇವಾಲಯದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿವೆ. ನಶಿಸಿಹೋಗುತ್ತಿದ್ದ ಐತಿಹಾಸಿಕ ತಾಣವೊಂದನ್ನು ಗ್ರಾಮಸ್ಥರೇ ಒಂದಾಗಿ ಪುನರ್ ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!