ಸಕಲೇಶಪುರ: ದೇಶದ ಭವಿಷ್ಯವನ್ನು ರೂಪಿಸುವ ಯುವಕ-ಯುವತಿಯರು ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲ್ಲೂಕಿನ ಹಾನುಬಾಳು ವಿನಾಯಕ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾನಿಧಿ ಶಾಲೆಯ ವಾರ್ಷಿಕೋತ್ಸವ ‘ವಿದ್ಯಾನಿಧಿಯೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ನಮ್ಮ ಬದುಕಿನ ಮೂಲಮಂತ್ರವಾಗಬೇಕು. ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುವತ್ತ ವಿದ್ಯಾರ್ಥಿಗಳು ದೃಢಸಂಕಲ್ಪ ಹೊಂದಬೇಕು ಎಂದರು.
ಯುವಕರು ದುಶ್ಚಟಗಳಿಗೆ ದಾಸರಾಗದೆ, ಬದುಕನ್ನು ರೂಪಿಸುವ ಶಿಕ್ಷಣದ ಕಡೆಗೆ ಗಮನ ಹರಿಸಬೇಕು. ಸಹನೆ, ಸೌಹಾರ್ದತೆ, ಸಹಬಾಳ್ವೆ ಹಾಗೂ ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಗಳ ಬೋಧನೆಗೆ ಸೀಮಿತವಾಗದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ. ಶಿಕ್ಷಣ, ತಂತ್ರಜ್ಞಾನ ಜ್ಞಾನ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಯುವಕರು ಬದಲಾವಣೆಯ ಹರಿಕಾರರಾಗಬಹುದು ಎಂದರು. ಯುವಜನಾಂಗ ದೇಶದ ಅತಿ ದೊಡ್ಡ ಶಕ್ತಿಯಾಗಿದ್ದು, ದೃಢಸಂಕಲ್ಪ ಹಾಗೂ ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ಮುಕ್ತ ಭಾರತದ ಕನಸನ್ನು ನನಸಾಗಿಸಬಹುದು ಎಂದು ಹೇಳಿದರು.
ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ಸಂಪೂರ್ಣ ನಿರ್ಮೂಲನೆ ಮಾಡಲಾಗುವುದಿಲ್ಲ. ಆದರೆ ನಾಗರಿಕರ ಜಾಗೃತಿ ಮತ್ತು ಭ್ರಷ್ಟರನ್ನು ಸಮಾಜದಿಂದ ಬಹಿಷ್ಕರಿಸುವ ಮನೋಭಾವದ ಮೂಲಕ ಅದನ್ನು ನಿಯಂತ್ರಿಸಬಹುದು. ದುರಾಸೆಯೇ ಭ್ರಷ್ಟಾಚಾರದ ಮೂಲವೆಂದು ಅವರು ಅಭಿಪ್ರಾಯಪಟ್ಟರು.
ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಟಿ ಅಭಿನಯ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಇದೇ ಸಂದರ್ಭದಲ್ಲಿ ಹಾನುಬಾಳಿನಲ್ಲಿ ಕಳೆದ 28 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವಾಸು ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ವಿಶೇಷವಾಗಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರಪ್ಪ (ಹೂಡಿ ಚಿನ್ನಿ), ಸಾಮಾಜಿಕ ಹೋರಾಟಗಾರ ಯಡಹಳ್ಳಿ ಮಂಜುನಾಥ್, ಎಸ್ಡಿಎಂಸಿ ಸದಸ್ಯ ಗಣೇಶ್, ಉಪಾಧ್ಯಕ್ಷೆ ಅನ್ವಿತಾ, ವಿನಾಯಕ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಲಿಂಗದೇವರು, ಖಜಾಂಚಿ ಹರೀಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು










