ಬೇಲೂರು: ದಶಕಗಳಿಂದ ಇಬ್ಬೀಡು ಗ್ರಾಮಲ್ಲಿದ್ದ ಸಮಸ್ಯೆಗೆ ಸ್ಪಂದಿಸಿ, ಶೀಘ್ರ ಪರಿಹಾರಕ್ಕೆ ಸೂಚಿಸಿದ ಹಾಸನ ಜಿಲ್ಲಾಧಿಕಾರಿ

ಬೇಲೂರು: ತಾಲ್ಲೂಕಿನ ಇಬ್ಬೀಡು ಗ್ರಾಮದಲ್ಲಿ ದಶಕಗಳಿಂದ ಇದ್ದ ಸ್ಮಶಾನ ಭೂಮಿಲ್ಲಿರೋ ಮನೆಗಳ‌ ಸಕ್ರಮಾತಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಸೂಚಿಸಿದರು.

ಇಂದು ಬೇಲೂರು ತಾಲ್ಲೂಕು ಪ್ರವಾಸ ಕೈಗೊಂಡಿದ್ದ ಜಿಲ್ಲಾಧಿಕಾರಿಯವರು ಇಬ್ಬೀಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದರು. ಸ.ನಂ11ರಲ್ಲಿ 2 ಎಕರೆ 12 ಗುಂಟೆ ಜಾಗದಲ್ಲಿ ಸ್ಮಶಾನ ಎಂದು ನಮೂದಾಗಿದೆ. ಈ ಜಾಗದಲ್ಲಿ ಮೂವತ್ತು, ನಲ್ವತ್ತು ವರ್ಷಗಳಿಂದ ಗ್ರಾಮಸ್ಥರು ಹತ್ತಾರು ಮನೆಗಳನ್ನ ಕಟ್ಟಿಕೊಂಡಿದ್ದು, ಗ್ರಾಮ ಪಂಚಾಯ್ತಿ, ಕೆನರಾ ಬ್ಯಾಂಕ್ ಕಟ್ಟಡ ಇನ್ನಿತರ ರೀತಿ ಗ್ರಾಮ ಅಭಿವೃದ್ಧಿಗೊಂಡಿದೆ.

ಆದ್ದರಿಂದ ದಶಕಗಳಿಂದ ಈ ಸಮಸ್ಯೆ ಜ್ವಲಂತವಾಗಿದ್ದು ಬದಲಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಈ ಜಾಗದಲ್ಲಿ ವಾಸಿಸುತ್ತಿರೋ ಮನೆಗಳಿಗೆ ಸಕ್ರಮಕ್ಕೆ ಕ್ರಮವಹಿಸಿ ಕಂದಾಯ ಗ್ರಾಮ ಮಾಡುವಂತೆ ಪ್ರಸ್ತಾವನೆಯನ್ನ ಒಂದು ವಾರದೊಳಗೆ ಸಲ್ಲಿಸಬೇಕೆಂದು ತಹಶೀಲ್ದಾರ್ ಶ್ರೀಧರ್ ರವರಿಗೆ ಸೂಚಿಸಿದರು. ಅಲ್ಲದೆ ಸ್ಮಶಾನ ಜಾಗದಲ್ಲಿ ಮನೆ ಕಟ್ಟೋದಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಪಿಡಿಓ ರವಿಕುಮಾರ್, ಗ್ರಾಮಸ್ಥರಾದ ಐ.ಎಲ್. ರಮೇಶ್, ಕೃಷ್ಣೇಗೌಡ, ಸುರೇಶ್, ಶರತ್ ಇತರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.