ಬೇಲೂರು: ಜನಸ್ಪಂದನಾ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

ಬೇಲೂರು: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನಾ ಸಭೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಜನರು ಕಂದಾಯ ಇಲಾಖೆಯ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವರಿಸಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ಹೊರ ಹಾಕಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಯಾವುದೇ ವಿಳಂಬ ವಿಲ್ಲದೆ ಬಗೆಹರಿಸಬೇಕು ಮತ್ತು ಪ್ರತಿ ತಿಂಗಳ ಮೂರನೇ  ಶನಿವಾರ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನಾ ಸಭೆಯ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ವಿವಿಧ ಸಮಸ್ಯೆ ಒಳಗೊಂಡ 150 ಕ್ಕೂ ಅಧಿಕ ಅರ್ಜಿ ಬಂದಿದ್ದು, ಹೆಚ್ಚು ಕಂದಾಯ ಇಲಾಖೆಗೆ ಸೇರಿವೆ. ಹೊಲಕ್ಕೆ ತೆರಳುವ ದಾರಿ ಸಮಸ್ಯೆ, ಸರ್ಕಾರಿ ಆಸ್ತಿ,ಕೆರೆಕಟ್ಟೆಗಳ ಒತ್ತುವರಿ,ರುದ್ರಭೂಮಿ ಸಮಸ್ಯೆ, ಸರ್ವೆ ಸಮಸ್ಯೆ, ಮಕ್ಕಳಿಂದ ಅನ್ಯಾಯ ಹೀಗೆ ನಾನಾ ಸಮಸ್ಯೆ ಹೊತ್ತ ಸಾರ್ವಜನಿಕರು ಡಿಸಿ ಅವರನ್ನು ಖುದ್ದು  ಭೇಟಿಯಾಗಿ ಪರಿಹಾರಕ್ಕೆ ಮನವಿ ಮಾಡಿದರು.

ಬಳಿಕ ಪುರಸಭಾ ವ್ಯಾಪ್ತಿಯ ಕೆಲ ವಾರ್ಡಿನಲ್ಲಿ ಕೊಳಚೆ ಪ್ರದೇಶ ದಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಶೀಘ್ರವೇ ಸರಿಪಡಿಸುವಂತೆ ಪುರಸಭಾ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಮಾತನಾಡಿದ ಲತಾಕುಮಾರಿ, ನಾನು ಡಿಸಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನೂರಾರು ಜನರು
ವಿವಿಧೆಡೆಗಳಿಂದ ತಮ್ಮ ಸಮಸ್ಯೆಗಳೊಂದಿಗೆ ಹಾಸನಕ್ಕೆ ಬರುತ್ತಿದ್ದುದನ್ನು ಗಮನಿಸಿ ಪ್ರತಿ ತಿಂಗಳ ಮೂರನೇ ಶನಿವಾರ ಅಯಾ ತಾಲ್ಲೂಕು ಮಟ್ಟದಲ್ಲಿಯೇ ಜನಸ್ಪಂದನಾ ಸಭೆ ನಡೆಸುತ್ತಿದ್ದೇನೆ. ಬಳಿಕ ಹಾಸನಕ್ಕೆ ಬರುವವರ ಸಂಖ್ಯೆ ತೀರ ಇಳಿಮುಖವಾಗಿದೆ ಎಂದರು.

ತಾಲ್ಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ನಾನೂ ಭಾಗವಹಿಸುವೆ ಎಂದ ಅವರು, ಹೆಚ್ಚಾಗಿ ಕಂದಾಯ  ಇಲಾಖೆಗೆ ಸಂಬಂಧಿಸಿದ  ಅರ್ಜಿಗಳು ಬಂದಿದ್ದು, ತ್ವರಿತವಾಗಿ ವಿಲೇವಾರಿ ನಡೆಸಬೇಕು ಎಂದು ಈಗಾಗಲೇ
ಅಧಿಕಾರಿಗಳಿಗೆ ತಿಳಿಸಲಾಗಿದೆ.

ಅಧಿಕಾರಿಗಳ ವಿಳಂಬ ಮತ್ತು ನಿರ್ಲಕ್ಷದಿಂದ ಸಾರ್ವಜನಿಕರು ಅಲೆಯುವಂತೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೆಲ ಭಾಗದಲ್ಲಿ ಕೆರೆ ಕಟ್ಟೆಗಳು ಮತ್ತು ಸರ್ಕಾರಿ ಆಸ್ತಿ ಒತ್ತುವರಿ ಆಗಿರುವ ಬಗ್ಗೆ ಅರ್ಜಿ ಬಂದಿವೆ.  ಸ್ಥಳೀಯರು ಸಹಕಾರ ನೀಡಿದರೆ ಖಂಡಿತ ಒತ್ತುವರಿ ತೆರವುಗೊಳಿಸುವ ವಿಶ್ವಾಸ  ವ್ಯಕ್ತ ಪಡಿಸಿದರು.

ಪ್ರಭಾರಿ ಉಪ ವಿಭಾಗಧಿಕಾರಿ ಮಂಜುನಾಥ್, ಭೂ ಪರಿವರ್ತನಾ ಜಿಲ್ಲಾ ಸಹಾಯಕ ಅಧಿಕಾರಿ ಹೇಮಲತಾ, ಅರಸೀಕೆರೆ ಡಿವೈಎಸ್‌ಪಿ ಗೋಪಿ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಸಿಪಿಐ ರೇವಣ್ಣ, ವಿವಿಧ ಇಲಾಖೆಯ
ಅಧಿಕಾರಿಗಳು ಹಾಜರಿದ್ದರು.

ತಾಲ್ಲೂಕು ಮಟ್ಟದ ಜನಸ್ಪಂದನಾ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಕಾರಣ  ಸಾರ್ವಜನಿಕರು ವಿವಿಧ ಇಲಾಖೆಯ ಸಮಸ್ಯೆ ತರುವ ಹಿನ್ನಲೆ ಅಧಿಕಾರಿಗಳು ಸಬೂಬು ಹೇಳದೆ ಭಾಗವಹಿಸಬೇಕು. ಉದ್ದೇಶಪೂರ್ವಕವಾಗಿ ಅರ್ಜಿ ವಿಲೇವಾರಿಗೆ ತಡ ಮಾಡಿದರೆ ಕ್ರಮ ಖಚಿತ. ಸಾರ್ವಜನಿಕರೂ
ಅಧಿಕಾರಿಗಳಿಗೆ ಒತ್ತಡ ಹಾಗೂ ಲಂಚ ನೀಡಬಾರದು ಎಂದು ಡಿಸಿ ಕಿವಿ ಮಾತು ಹೇಳಿದರು.