ದೊಡ್ಡಬಳ್ಳಾಪುರ : ಪ್ರೀತಿ ಹೆಸರಲ್ಲಿ ವಿವಾಹಿತ ಮಹಿಳೆ ಜೊತೆ ಚಕ್ಕಂದ: ನಂಬಿಸಿ ಗರ್ಭಪಾತ ಮಾಡಿಸಿದ್ನಾ ಯುವಕ?

ದೊಡ್ಡಬಳ್ಳಾಪುರ : ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿ, ಬಳಿಕ ಆಕೆ ಗರ್ಭಿಣಿ ಎಂಬುದು ತಿಳಿದ ನಂತರ ಊಟದಲ್ಲಿ ಗರ್ಭಪಾತದ ಮಾತ್ರೆ ಸೇರಿಸಿ ಕೊಟ್ಟಿದ್ದಾನೆ ಎಂಬ ಗಂಭೀರ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ.

ಈ ಸಂಬಂಧ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಈಗಾಗಲೇ ಓರ್ವ ಮಗಳು ಇದ್ದು, ಆರೋಪಿ ಹಾಗೂ ಆತನ ಕುಟುಂಬ ತನ್ನ ಮೇಲೆ ಶೋಷಣೆ ನಡೆಸಿದ್ದಾರೆ ಎಂದು ಆಕೆ ದೂರಿದ್ದಾರೆ.

ಘಟನೆ ವಿವರ

ಗಂಡನಿಂದ ದೂರವಾಗಿದ್ದ ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸಮೀಪದ ಕೆಫೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಪ್ರವೀಣ್ ಕುಮಾರ್ ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ ನಂತರ ಪ್ರೀತಿಯಾಗಿ ಬದಲಾಗಿದೆ.

ತನ್ನಿಗೆ ಈಗಾಗಲೇ ಮದುವೆಯಾಗಿದ್ದು ಮಗಳಿದ್ದ ವಿಷಯವನ್ನು ಮಹಿಳೆ ತಿಳಿಸಿದ್ದರೂ, ಮದುವೆಯಾಗುವುದಾಗಿ ನಂಬಿಸಿ ಆರೋಪಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂದು ದೂರಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಸಂತ್ರಸ್ತೆ ಆತನ ಮನೆಯಲ್ಲೇ ವಾಸವಿದ್ದಳು ಎನ್ನಲಾಗಿದೆ.

ನಾಲ್ಕು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದ ನಂತರ ಆರೋಪಿ ತನ್ನ ಅಸಲಿ ಮುಖ ತೋರಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮದುವೆಗೆ ಒತ್ತಾಯಿಸಿದಾಗ ಗಂಡನನ್ನು ಬಿಟ್ಟವಳು, ಬೇರೆ ಜಾತಿಯವಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.

ಆತನ ಕುಟುಂಬವೂ ಜಾತಿ ನಿಂದನೆ ಮಾಡಿದ್ದು, ಎಲ್ಲರೂ ಸೇರಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಪೊಲೀಸರು ಇಬ್ಬರನ್ನೂ ಕರೆದು ಬುದ್ಧಿ ಹೇಳಿದ್ದರು.

ಆ ಬಳಿಕ ಕೆಲ ದಿನ ಆರೋಪಿ ಸರಿಯಾಗಿ ನೋಡಿಕೊಂಡಿದ್ದಾನೆ. ಆದರೆ ಜನವರಿ 25ರಂದು ಲಾಡ್ಜ್‌ನಲ್ಲಿ ವಾಸವಾಗಿದ್ದ ವೇಳೆ ಆತ ತಂದ ಎಗ್ ರೈಸ್ ತಿಂದ ನಂತರ ಗರ್ಭಪಾತವಾಗಿದೆ. ಆತ ಊಟದಲ್ಲಿ ಗರ್ಭಪಾತದ ಮಾತ್ರೆ ಸೇರಿಸಿ ಕೊಟ್ಟಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.